ADVERTISEMENT

ಪಾಕಿಸ್ತಾನ: ಸ್ಪೀಕರ್‌, ಡೆಪ್ಯುಟಿ ಸ್ಪೀಕರ್ ರಾಜೀನಾಮೆ

ಇಮ್ರಾನ್‌ ಖಾನ್‌ ವಿರುದ್ಧ ಅವಿಶ್ವಾಸ ನಿರ್ಣಯ

ಪಿಟಿಐ
Published 9 ಏಪ್ರಿಲ್ 2022, 20:13 IST
Last Updated 9 ಏಪ್ರಿಲ್ 2022, 20:13 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಇಸ್ಲಾಮಾಬಾದ್‌: ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ ಸರ್ಕಾರದ ವಿರುದ್ಧ ಸಲ್ಲಿಕೆಯಾಗಿರುವ ಅವಿಶ್ವಾಸ ನಿರ್ಣಯದ ನಿರ್ಣಾಯಕ ಸಂಸತ್‌ ಅಧಿವೇಶನ ಪುನರಾರಂಭಗೊಂಡ ಕೆಲ ನಿಮಿಷಗಳಲ್ಲೇ ಸ್ಪೀಕರ್‌ ಅಸಾದ್‌ ಖೈಸರ್‌ ಹಾಗೂ ಡೆಪ್ಯುಟಿ ಸ್ಪೀಕರ್‌ ಖಾಸಿಂ ಸೂರಿ ರಾಜೀನಾಮೆ ನೀಡಿದ್ದಾರೆ.

ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಸಂಸತ್ತಿನಲ್ಲಿ ಶನಿವಾರ ಇಡೀ ದಿನ ವಾಗ್ವಾದ ನಡೆಯಿತು. ಸ್ಪೀಕರ್ ಖೈಸರ್‌ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಅಧಿವೇಶನವು ಒಂದಿಲ್ಲೊಂದು ಕಾರಣಕ್ಕಾಗಿ ಮೂರು ಬಾರಿ ಮುಂದೂಡಲ್ಪಟ್ಟಿತು.

ರಾಜೀನಾಮೆಯನ್ನು ಘೋಷಿಸಿದ ನಂತರ, ಪಿಎಂಎಲ್-ಎನ್‌ ಪಕ್ಷದ ಅಯಾಜ್ ಸಾದಿಕ್ ಅವರ ಅಧ್ಯಕ್ಷತೆಯಲ್ಲಿ ಕಲಾಪ ನಡೆದಿದ್ದು, ಪ್ರಧಾನಿ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಮತದಾನ ಪ್ರಕ್ರಿಯೆ ತಡರಾತ್ರಿ ಆರಂಭವಾಯಿತು.

ADVERTISEMENT

ನಾಟಕೀಯ ಬೆಳವಣಿಗೆಯೊಂದರಲ್ಲಿ ಇಮ್ರಾನ್‌ ಖಾನ್‌ ಅವರ ಕಾರ್ಯದರ್ಶಿಯನ್ನು ದಿಢೀರ್‌ ವರ್ಗಾವಣೆಮಾಡಿ ಅಧಿಸೂಚನೆ ಹೊರಡಿಸಲಾಯಿತು.

ಇನ್ನೊಂದೆಡೆ ಆಡಳಿತಾರೂಢ ಪಕ್ಷವಾದ ಪಿಟಿಐ ಬೆಂಬಲಿಗರು ಸಂಸತ್ ಹೊರಗಡೆ ಭಾರಿ ಪ್ರತಿಭಟನೆ ನಡೆಸಿದರು.

ಸುಪ್ರೀಂ ಕೋರ್ಟ್‌ ತೀರ್ಪಿನಂತೆ, ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ.

ಮರುಪರಿಶೀಲನೆ ಅರ್ಜಿ

ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದ ಉಪ ಸ್ಪೀಕರ್‌ ನಿರ್ಧಾರವನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಇಮ್ರಾನ್‌ ನೇತೃತ್ವದ ತೆಹ್ರೀಕ್‌ ಎ ಇನ್ಸಾಫ್‌ ಪಕ್ಷವು ಅರ್ಜಿ ಸಲ್ಲಿಸಿದೆ.

ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು ನೀಡಿದ್ದ ತೀರ್ಪಿನ ಅನುಷ್ಠಾನವನ್ನು ಅಮಾನತಿನಲ್ಲಿ ಇರಿಸಬೇಕು ಎಂದು
ಅರ್ಜಿಯಲ್ಲಿ ಕೋರಲಾಗಿದೆ.ಸಂಸತ್ತಿನ ಕಲಾಪದ ವೇಳಾಪಟ್ಟಿಯನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಇದು ಸಂಸತ್ತಿನ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದಂತಾಗಿದೆ. ಇದು ಸಂವಿಧಾನದ ಉಲ್ಲಂಘನೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಸಾಂವಿಧಾನಿಕ ಹೊಣೆಗಾರಿಕೆಗಳನ್ನು ನಿಭಾಯಿಸುವಂತೆ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿ ಬಲವಂತ ಮಾಡಲು ಅವಕಾಶ ಇಲ್ಲ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.