ಇಸ್ಲಾಮಾಬಾದ್: ‘ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ಪರಸ್ಪರ ರಕ್ಷಣಾ ಒಪ್ಪಂದದಲ್ಲಿ ಇತರೆ ಅರಬ್ ರಾಷ್ಟ್ರಗಳ ಪ್ರವೇಶವನ್ನು ಅಲ್ಲಗಳೆಯುವಂತಿಲ್ಲ. ಇದಕ್ಕಾಗಿ ಬಾಗಿಲು ಇನ್ನೂ ತೆರೆದೇ ಇದೆ’ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದ್ದಾರೆ.
’ಪರಸ್ಪರ ರಕ್ಷಣಾ ಕಾರ್ಯತಂತ್ರಕ್ಕೆ’ ಸೌದಿ ಮತ್ತು ಪಾಕಿಸ್ತಾನ ಬುಧವಾರ ಸಹಿ ಹಾಕಿತ್ತು. ಈ ಒಪ್ಪಂದಲ್ಲಿ ಇನ್ನಷ್ಟು ಅರಬ್ ರಾಷ್ಟ್ರಗಳು ಸೇರ್ಪಡೆಯಾಗುವ ಸಾಧ್ಯತೆ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಇಷ್ಟು ಬೇಗ ಈ ಪ್ರಶ್ನೆಗೆ ಉತ್ತರಿಸುವುದಿಲ್ಲ. ಆದರೆ, ಈ ಸಾಧ್ಯತೆಯ ಬಾಗಿಲು ಇನ್ನೂ ಮುಚ್ಚಿಲ್ಲ’ ಎಂದು ಅವರು ಹೇಳಿದರು.
‘ಇದೊಂದು ಆಕ್ರಮಣಕಾರಿ ಒಪ್ಪಂದವಲ್ಲ. ಬದಲಿಗೆ ’ನ್ಯಾಟೊ‘ ಮಾದರಿಯ ರಕ್ಷಣಾ ವ್ಯವಸ್ಥೆ ಎಂದ ಆಸೀಫ್, ವಿಶೇಷವಾಗಿ ಮುಸ್ಲಿಂ ರಾಷ್ಟ್ರಗಳಿಗೆ ತಮ್ಮ ದೇಶವನ್ನು ರಕ್ಷಿಸಿಕೊಳ್ಳಲು, ಒಟ್ಟಾಗಿ ಹೋರಾಡಲು ಇಂಥದೊಂದು ’ಪರಸ್ಪರ ರಕ್ಷಣಾ ಒಪ್ಪಂದದ ಅಗತ್ಯವಿದೆ. ಇದು ಇಲ್ಲಿನ ಜನರ ಮೂಲಭೂತ ಹಕ್ಕು’ ಎಂದು ಪ್ರತಿಪಾದಿಸಿದರು.
ಕೊಲ್ಲಿ ರಾಷ್ಟ್ರಗಳಲ್ಲಿ ಅಮೆರಿಕ ಪ್ರಮುಖ ಮಿತ್ರ ರಾಷ್ಟ್ರವಾದ ಕತಾರ್ ಮೇಲೆ, ಹಮಾಸ್ ಮುಖಂಡರನ್ನು ಗುರಿಯಾಗಿಸಿ ಇಸ್ರೇಲ್ ಸೇನೆ ದಾಳಿ ನಡೆಸಿದ ಬೆನ್ನಲ್ಲೇ, ಪಾಕ್–ಸೌದಿ ನಡುವೆ ಈ ರಕ್ಷಣಾ ಒಪ್ಪಂದ ಏರ್ಪಟ್ಟಿತ್ತು.
ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನವನ್ನು ಏಕಾಂಗಿ ಮಾಡುವ ಬದಲು ಮೋದಿ ಸರ್ಕಾರದ ರಾಜತಾಂತ್ರಿಕ ನೀತಿಯು ಪಾಕ್‌ಗೆ ಶಕ್ತಿಶಾಲಿ ರಕ್ಷಣಾ ಛತ್ರಿ ಪಡೆಯಲು ಅವಕಾಶ ಕಲ್ಪಿಸಿದೆರಣದೀಪ್ ಸುರ್ಜೇವಾಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಅಮೆರಿಕದ ಪಾತ್ರ ಅಲ್ಲಗಳೆದ ಆಸೀಫ್
ಪಾಕ್ –ಸೌದಿ ರಕ್ಷಣಾ ಒಪ್ಪಂದದ ವಿಚಾರದಲ್ಲಿ ಅಮೆರಿಕವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಈ ವಿಷಯದಲ್ಲಿ ಮೂರನೆಯ ವ್ಯಕ್ತಿ/ ದೇಶ ಭಾಗಿಯಾಗಲು ಯಾವುದೇ ಆಧಾರ ಅಥವಾ ಸಮರ್ಥನೆ ಇಲ್ಲ’ ಎಂದು ಆಸೀಫ್ ಹೇಳಿದರು. ’ಒಪ್ಪಂದದಲ್ಲಿ ಪಾಕಿಸ್ತಾನದ ಅಣ್ವಸ್ತ್ರ ಬಳಸುವ ವಿಚಾರವೂ ಸೇರಿದೆಯೇ ಎಂಬ ಪ್ರಶ್ನೆಗೆ ’ಖಂಡಿತವಾಗಿಯೂ ನಮ್ಮ ಬಳಿ ಏನಿದೆಯೋ ಅಥವಾ ನಮ್ಮ ಸಾಮರ್ಥ್ಯ ಏನಿದೆಯೋ ಅದೆಲ್ಲವೂ ಈ ಒಪ್ಪಂದದಡಿ ಬರುತ್ತದೆ’ ಎಂದರು. ಪಾಕಿಸ್ತಾನವು ಬೇರೆ ದೇಶಗಳೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಳ್ಳಬಾರದು ಅಥವಾ ಪಾಕ್–ಸೌದಿ ರಕ್ಷಣಾ ಒಪ್ಪಂದದಲ್ಲಿ ಇತರೆ ಸೌದಿ ರಾಷ್ಟ್ರಗಳಿಗೆ ಅವಕಾಶ ಕೊಡಬಾರದು ಎನ್ನುವ ಯಾವುದೇ ಷರತ್ತು ಈ ಒಪ್ಪಂದದಲ್ಲಿಇರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಮೂರನೆಯ ದೇಶದ ವಿರುದ್ಧ ಅಲ್ಲ’
ಇಸ್ಲಾಮಾಬಾದ್: ‘ಸೌದಿಯೊಂದಿಗೆ ನಾವು ರಕ್ಷಣಾ ಒಪ್ಪಂದ ಮಾಡಿಕೊಂಡಿರುವುದು ಮೂರನೆಯ ದೇಶದ ವಿರುದ್ಧವಾಗಿ ಅಲ್ಲ. ಪಾಕ್ ಮತ್ತು ಸೌದಿ ನಡುವಿನ ರಕ್ಷಣಾ ಸಹಕಾರದ ಜಂಟಿ ಸಹಭಾಗಿತ್ವವನ್ನು ಈ ಒಪ್ಪಂದ ಪ್ರತಿಬಿಂಬಿಸುತ್ತದೆ’ ಎಂದು ಪಾಕಿಸ್ತಾನ ಶುಕ್ರವಾರ ಹೇಳಿದೆ. ‘ಪ್ರಾದೇಶಿಕ ಮತ್ತು ಇಡೀ ವಿಶ್ವದ ಶಾಂತಿ ಮತ್ತು ಭದ್ರತೆಯ ದೃಷ್ಟಿಯಿಂದ ಈ ಒಪ್ಪಂದವು ಮಹತ್ವದ ಮೈಲಿಗಲ್ಲು’ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಶಫಕ್ ಆಲಿ ಖಾನ್ ಹೇಳಿದ್ದಾರೆ.
‘ಭರವಸೆ ಇದೆ’
ಮುಂಬೈ : ಭಾರತವು ಸೌದಿ ಅರೇಬಿಯಾದೊಂದಿಗೆ ವಿಶಾಲ ಶ್ರೇಣಿಯ ವ್ಯವಹಾರ ಪಾಲುದಾರಿಕೆ ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಗಮನಾರ್ಹ ಪ್ರಗತಿ ಕಂಡಿದೆ. ಹೀಗಾಗಿ ಪರಸ್ಪರ ಹಿತಾಸಕ್ತಿ ಮತ್ತು ಎರಡು ದೇಶಗಳ ನಡುವಿನ ಸೂಕ್ಷ್ಮತೆಗಳನ್ನು ಸೌದಿ ಗಮನದಲ್ಲಿ ಇಟ್ಟುಕೊಳ್ಳುತ್ತದೆ ಎಂಬ ಭರವಸೆ ಇದೆ’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.