ಜನರಲ್ ಅಸಿಮ್ ಮುನಿರ್
ಇಸ್ಲಾಮಾಬಾದ್: ಭಾರತದ ಜತೆಗಿನ ಸೇನಾ ಸಂಘರ್ಷದಲ್ಲಿ ತನ್ನ 11 ಸೈನಿಕರು ಮೃತಪಟ್ಟಿದ್ದು, ಇತರ 78 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಮಂಗಳವಾರ ಹೇಳಿದೆ.
ಮೇ 6 ಮತ್ತು 7ರ ರಾತ್ರಿ ಭಾರತ ನಡೆಸಿದ ‘ಅಪ್ರಚೋದಿತ ದಾಳಿಯಲ್ಲಿ’ 40 ನಾಗರಿಕರು ಬಲಿಯಾಗಿದ್ದು, 121 ಜನರು ಗಾಯಗೊಂಡಿದ್ದಾರೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ನಾಲ್ಕು ದಿನ ನಡೆದ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಸಂಘರ್ಷವನ್ನು ಕೊನೆಗೊಳಿಸಲು ಭಾರತ ಮತ್ತು ಪಾಕಿಸ್ತಾನ ಶನಿವಾರ ಕದನ ವಿರಾಮ ಒಪ್ಪಂದ ಮಾಡಿಕೊಂಡಿದ್ದವು.
‘ತಾಯ್ನೆಲವನ್ನು ರಕ್ಷಿಸಲು ಹೋರಾಟ ನಡೆಸಿದ ಸಂದರ್ಭ ಪಾಕಿಸ್ತಾನದ ಸಶಸ್ತ್ರ ಪಡೆಗಳ 11 ಸಿಬ್ಬಂದಿ ಮೃತಪಟ್ಟಿದ್ದಾರೆ’ ಎಂದು ಹೇಳಿಕೆ ತಿಳಿಸಿದೆ.
ಮೃತರಲ್ಲಿ ಪಾಕಿಸ್ತಾನ ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸುಫ್, ಮುಖ್ಯ ತಂತ್ರಜ್ಞ ಔರಂಗಜೇಬ್, ಹಿರಿಯ ತಂತ್ರಜ್ಞರಾದ ನಜೀಬ್, ಮುಬಾಶಿರ್ ಮತ್ತು ಫಾರೂಕ್ ಸೇರಿದ್ದಾರೆ ಎಂದು ಮಾಹಿತಿ ನೀಡಿದೆ.
ಭೂಸೇನೆಯ ಯೋಧರಾದ ಅಬ್ದುಲ್ ರಹ್ಮಾನ್, ದಿಲಾವರ್ ಖಾನ್, ಇಕ್ರಮುಲ್ಲಾ, ವಕಾರ್ ಖಾಲಿದ್, ಮುಹಮ್ಮದ್ ಅದೀಲ್ ಅಕ್ಬರ್ ಮತ್ತು ನಿಸಾರ್ ಅವರು ಬಲಿಯಾಗಿದ್ದಾರೆ ಎಂದಿದೆ.
‘ಭಾರತದ ದಾಳಿಗೆ ಪಾಕಿಸ್ತಾನದ ಸಶಸ್ತ್ರ ಪಡೆಗಳು ‘ಬುನ್ಯಾನುಮ್ ಮಕ್ಸೂಸ್’ ಹೆಸರಿನ ಕಾರ್ಯಾಚರಣೆಯಲ್ಲಿ ತಕ್ಕ ಪ್ರತ್ಯುತ್ತರ ನೀಡಿವೆ. ಪಾಕಿಸ್ತಾನದ ಸಾರ್ವಭೌಮತ್ವ ಅಥವಾ ಪ್ರಾದೇಶಿಕ ಸಮಗ್ರತೆಯ ಮೇಲೆ ಮತ್ತೆ ದಾಳಿ ನಡೆಸುವ ಯಾವುದೇ ಪ್ರಯತ್ನ ನಡೆದರೆ, ಸಂಪೂರ್ಣ ಶಕ್ತಿಯೊಂದಿಗೆ ಎದುರಿಸಲಾಗುವುದು’ ಎಂದು ಪ್ರಕಟಣೆ ತಿಳಿಸಿದೆ.
ಭಾರತ್ ಪಾಕ್ ಸೇನಾ ಸಂಘರ್ಷದಲ್ಲಿ ಪಾಕ್‌ನ 40ಕ್ಕೂ ಹೆಚ್ಚು ಸೈನಿಕರು ಮೃತರಾಗಿದ್ದಾರೆ ಎಂದು ಭಾರತೀಯ ಸೇನೆ ವಕ್ತಾರರು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.