ADVERTISEMENT

33 ಉಗ್ರರ ಹತ್ಯೆ; 31 ಯೋಧರು ಹುತಾತ್ಮ, 354 ಒತ್ತೆಯಾಳುಗಳ ರಕ್ಷಣೆ: ಪಾಕ್

33 ಉಗ್ರರನ್ನು ಹತ್ಯೆ; 31 ಯೋಧರು ಹುತಾತ್ಮ, 354 ಒತ್ತೆಯಾಳುಗಳ ರಕ್ಷಣೆ: ಪಾಕ

ರಾಯಿಟರ್ಸ್
Published 15 ಮಾರ್ಚ್ 2025, 1:57 IST
Last Updated 15 ಮಾರ್ಚ್ 2025, 1:57 IST
<div class="paragraphs"><p>ಬಲೂಚಿಸ್ತಾನ ಲಿಬರೇಷನ್ ಆರ್ಮಿ</p></div>

ಬಲೂಚಿಸ್ತಾನ ಲಿಬರೇಷನ್ ಆರ್ಮಿ

   

( ಚಿತ್ರ ಕೃಪೆ–  X/@RNA)

ಇಸ್ಲಾಮಾಬಾದ್‌: ಪಾಕಿಸ್ತಾನದ ಬಲೂಚಿಸ್ಥಾನ್‌ ಪ್ರಾಂತ್ಯದಲ್ಲಿ ಉಗ್ರರು ರೈಲಿನ ಮೇಲೆ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿದೆ. ಇದರಲ್ಲಿ ಯೋಧರು, ರೈಲ್ವೆ ಸಿಬ್ಬಂದಿ ಹಾಗೂ ಸಾರ್ವಜನಿಕರೂ ಸೇರಿದ್ದಾರೆ. ದಾಳಿಕೋರರಿಗೆ ಭಾರತ ಹಾಗೂ ಅಫ್ಗಾನಿಸ್ತಾನ ಬೆಂಬಲವಿದೆ ಎಂದು ಪಾಕ್‌ ಸೇನೆ ಆರೋಪಿಸಿದೆ.

ADVERTISEMENT

ದಾಳಿಯ ಹೊಣೆ ಹೊತ್ತುಕೊಂಡಿರುವ ಪ್ರತ್ಯೇಕತಾವಾದಿ ಬಲೋಚ್‌ ಲಿಬರೇಷನ್‌ ಆರ್ಮಿ (ಬಿಎಲ್‌ಎ), ತನ್ನ ಸಂಘಟನೆಯ ಹೋರಾಟಗಾರರು 214 ಒತ್ತೆಯಾಳುಗಳೊಂದಿಗೆ ಪರಾರಿಯಾಗಿದ್ದು, ಅವರನ್ನೆಲ್ಲ ನೇಣಿಗೇರಿಸಿದ್ದಾರೆ ಎಂದು ಹೇಳಿಕೆ ನೀಡಿದೆ. ಆದರೆ, ಅದಕ್ಕೆ ತಕ್ಕ ಸಾಕ್ಷ್ಯಗಳನ್ನು ನೀಡಿಲ್ಲ.

ಸುಮಾರು 450 ಪ್ರಯಾಣಿಕರಿದ್ದ ಜಾಫರ್ ಎಕ್ಸ್‌ಪ್ರೆಸ್ ಹೆಸರಿನ ರೈಲಿನ ಮೇಲೆ ಮಂಗಳವಾರ (ಮಾರ್ಚ್‌ 11) ದಾಳಿ ನಡೆದಿತ್ತು. ಕ್ವೆಟ್ಟಾದಿಂದ ಪೆಶಾವರ ಕಡೆ ಪ್ರಯಾಣಿಸುತ್ತಿದ್ದ ರೈಲು ಗುಡ್ಡಗಾಡು ಪ್ರದೇಶದಲ್ಲಿದ್ದ ವೇಳೆ, ರೈಲಿನ ಪಕ್ಕದಲ್ಲೇ ಭಾರಿ ಸ್ಫೋಟ ನಡೆಸಲಾಗಿತ್ತು. ಇದರಿಂದ, ರೈಲು ಹಳಿ ತಪ್ಪಿತ್ತು. ಕೂಡಲೇ, ರೈಲಿಗೆ ನುಗ್ಗಿದ್ದ ಉಗ್ರರು ಪ್ರಯಾಣಿಕರನ್ನು ಒತ್ತೆ ಇರಿಸಿಕೊಂಡಿದ್ದರು.

ಪ್ರಯಾಣಿಕರ ರಕ್ಷಣೆಗೆ ಧಾವಿಸಿದ್ದ ಭದ್ರತಾ ಪಡೆಗಳು ಬುಧವಾರ ತಡರಾತ್ರಿವರೆಗೆ ಕಾರ್ಯಾಚರಣೆ ನಡೆಸಿದ್ದವು.

ಪ್ರಕರಣದ ಕುರಿತು ಮಾಹಿತಿ ನೀಡಿರುವ ಸೇನೆಯ ವಕ್ತಾರ ಅಹ್ಮದ್‌ ಷರೀಫ್‌ ಚೌಧರಿ, 'ಕಾರ್ಯಾಚರಣೆ ವೇಳೆ 33 ಉಗ್ರರನ್ನು ಹತ್ಯೆ ಮಾಡಲಾಗಿದೆ. 354 ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ. ಮತ್ತಷ್ಟು ಒತ್ತೆಯಾಳುಗಳೊಂದಿಗೆ ಬಿಎಲ್‌ಎ ಪರಾರಿಯಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗೆಯೇ, '23 ಯೋಧರು, ರೈಲ್ವೆಯ ಮೂವರು ನೌಕರರು ಮತ್ತು ಐವರು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂಬುದು ತಿಳಿದುಬಂದಿದೆ. ಇದಕ್ಕೂ ಮೊದಲು 25 ಮಂದಿ ಮೃತಪಟ್ಟಿದ್ದಾರೆ ಎಂದು ಅಂದಾಜಿಸಿದ್ದೆವು' ಎಂದು ತಿಳಿಸಿದ್ದಾರೆ.

ಮುಂದುವರಿದು, 'ದಾಳಿಕೋರರಿಗೆ ಭಾರತ ಮತ್ತು ಅಫ್ಗಾನಿಸ್ತಾನದ ಬೆಂಬಲವಿದೆ ಎಂಬುದಕ್ಕೆ ಪಾಕಿಸ್ತಾನದ ಬಳಿ ಸಾಕ್ಷ್ಯಗಳಿವೆ' ಎಂದೂ ಹೇಳಿದ್ದಾರೆ. ಆದರೆ, ಈ ಆರೋಪಗಳನ್ನು ಭಾರತ ಮತ್ತು ಅಫ್ಗಾನಿಸ್ತಾನ ಅಲ್ಲಗಳೆದಿವೆ.

ದಾಳಿಗೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿರುವ ಬಿಎಲ್‌ಎ, 'ಸಂಘರ್ಷವು ಇಲ್ಲಿಗೇ ಮುಗಿದಿಲ್ಲ; ಮತ್ತಷ್ಟು ತೀವ್ರಗೊಂಡಿದೆ' ಎಂದಿದೆ. ಆ ಮೂಲಕ ಮತ್ತಷ್ಟು ದಾಳಿಯ ಎಚ್ಚರಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.