ADVERTISEMENT

ಪಾಕಿಸ್ತಾನ ರೈಲು ಹೈಜಾಕ್‌: ಘಟನೆಯ ಭಯಾನಕತೆ ವಿವರಿಸಿದ ಒತ್ತೆಯಾಳುಗಳು...

ಪಿಟಿಐ
Published 12 ಮಾರ್ಚ್ 2025, 10:17 IST
Last Updated 12 ಮಾರ್ಚ್ 2025, 10:17 IST
<div class="paragraphs"><p>ದಾಳಿಯಲ್ಲಿ ರಕ್ಷಿಸಲ್ಪಟ್ಟ ಒತ್ತೆಯಾಳುಗಳು</p></div>

ದಾಳಿಯಲ್ಲಿ ರಕ್ಷಿಸಲ್ಪಟ್ಟ ಒತ್ತೆಯಾಳುಗಳು

   

ರಾಯಿಟರ್ಸ್‌

ಇಸ್ಲಾಮಾಬಾದ್‌: ಸುತ್ತಲೂ ಗುಂಡಿನ ಶಬ್ಧ, ಜನರ ಕಿರುಚಾಟ, ರೈಲಿನೊಳಗೆ ನುಗ್ಗಿದ ಬಂದೂಕುಧಾರಿಗಳು... ಈ ಭಯಾನಕ ಕ್ಷಣವನ್ನು ಎಂದಿಗೂ ಮರೆಯಲಾರೆವು ಎಂದು ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನಡೆದ ರೈಲು ದಾಳಿ ಬಗ್ಗೆ ಭದ್ರತಾ ಪಡೆಗಳಿಂದ ರಕ್ಷಿಸಲ್ಪಟ್ಟ ಒತ್ತೆಯಾಳುಗಳು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ADVERTISEMENT

ಕ್ವೆಟ್ಟಾದಿಂದ ಪೆಶಾವರಕ್ಕೆ ತೆರಳುತ್ತಿದ್ದ ‘ಜಾಫರ್ ಎಕ್ಸ್‌ಪ್ರೆಸ್‌’ ರೈಲಿನ ಮೇಲೆ ಮಂಗಳವಾರ ಮಧ್ಯಾಹ್ನ ಉಗ್ರರ ದಾಳಿ ನಡೆದಿತ್ತು. 9 ಬೋಗಿಗಳಿದ್ದ ಸುಮಾರು 400 ಪ್ರಯಾಣಿಕರನ್ನು ಉಗ್ರರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ದಾಳಿಯ ಹೊಣೆಯನ್ನು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ) ಹೊತ್ತುಕೊಂಡಿದೆ.

‘ಮೊದಲಿಗೆ ದೊಡ್ಡ ಸ್ಟೋಟವೊಂದು ಕೇಳಿಬಂದಿತ್ತು. ನಂತರ ಸುಮಾರು 1 ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದೆ. ಬುಲೆಟ್‌ಗಳು ನಾವು ಕುಳಿತ ಬೋಗಿಗೆ ಅಪ್ಪಳಿಸುತ್ತಿದ್ದವು’ ಎಂದು ಉಗ್ರರಿಂದ ರಕ್ಷಿಸಲ್ಪಟ್ಟ 104 ಪ್ರಯಾಣಿಕರಲ್ಲಿ ಒಬ್ಬರಾಗಿರುವ ಮುಷ್ತಾಕ್‌ ಮಹಮ್ಮದ್ ಬಿಬಿಸಿ ಉರ್ದು ವಾಹಿನಿಗೆ ಘಟನೆ ಕುರಿತು ವಿವರಿಸಿದ್ದಾರೆ.

ಮುಷ್ತಾಕ್‌ ಅವರು ರೈಲಿನ ಮೂರನೇ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು.

‘ಗುಂಡಿನ ದಾಳಿ ಮುಗಿಯುತ್ತಲೇ ರೈಲಿನೊಳಗೆ ನುಗ್ಗಿದ ಉಗ್ರರು ನಮ್ಮ ಗುರುತಿನ ಚೀಟಿಗಳನ್ನು ಪರಿಶೀಲಿಸಲು ಪ್ರಾರಂಭಿಸಿದರು. ಈ ವೇಳೆ ಮೂವರು ಉಗ್ರರು ಬೋಗಿಯ ಬಾಗಿಲ ಬಳಿ ನಿಂತು ಕಾವಲು ಕಾಯುತ್ತಿದ್ದರು’ ಎಂದರು.

‘ಭಯದಿಂದ ಉಸಿರಾಡಲು ಕಷ್ಟವಾಗುತ್ತಿತ್ತು’

‘ಸ್ಪೋಟವು ಎಷ್ಟು ತೀವ್ರವಾಗಿತ್ತೆಂದರೆ ರೈಲಿನ ಕಿಟಕಿಗಳು ಮತ್ತು ಬಾಗಿಲುಗಳು ಅಲುಗಾಡಿದವು. ನನ್ನ ಮಕ್ಕಳಲ್ಲಿ ಒಬ್ಬ ಸೀಟಿನಿಂದ ಕೆಳಗೆ ಬಿದ್ದನು’ ಎಂದು ಮತ್ತೊಬ್ಬ ಪ್ರಯಾಣಿಕ ಇಷಾಕ್‌ ನೂರ್‌ ವಿವರಿಸಿದ್ದಾರೆ.

ಇಷಾಕ್‌ ಅವರು ತಮ್ಮ ಹೆಂಡತಿ ಮತ್ತು ಎರಡು ಮಕ್ಕಳೊಂದಿಗೆ ಕ್ವೆಟ್ಟಾದಿಂದ ರಾವಲ್ಪಿಂಡಿಗೆ ಪ್ರಯಾಣಿಸುತ್ತಿದ್ದರು.

‘ಗುಂಡಿನ ದಾಳಿಗೆ ಮಕ್ಕಳು ಭಯಭೀತರಾಗಿದ್ದರು. ಮಕ್ಕಳಿಗೆ ಗುಂಡು ತಗುಲದಂತೆ ಒಂದು ಮಗುವನ್ನು ನಾನು ಮುಚ್ಚಿಕೊಂಡರೆ, ಇನ್ನೊಂದು ಮಗುವನ್ನು ನನ್ನ ಹೆಂಡತಿ ಮುಚ್ಚಿಕೊಂಡಿದ್ದಳು. ನಾವು ಸತ್ತರು ನಮ್ಮ ಮಕ್ಕಳು ಸುರಕ್ಷಿತವಾಗಿರಲಿ ಎಂಬುವುದೇ ನಮ್ಮ ಆಸೆಯಾಗಿತ್ತು’ ಎಂದು ಕಂಬನಿ ಮಿಡಿದರು.

‘ಸುಮಾರು ಮುಕ್ಕಾಲು ಗಂಟೆ ಗುಂಡಿನ ದಾಳಿ ನಡೆದಿರಬಹುದು. ಅಲ್ಲಿ ಏನು ನಡೆಯುತ್ತಿತ್ತು ಎಂಬುವುದರ ಬಗ್ಗೆಯೂ ನಮಗೆ ಅರಿವಿರಲಿಲ್ಲ. ಉಸಿರಾಡಲು ಸಹ ಆಗುತ್ತಿರಲಿಲ್ಲ’ ಎಂದರು.

‘ಅವರು ಬಲೂಚಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಮತ್ತು ಅವರ ನಾಯಕ ಪದೇ ಪದೇ ಭದ್ರತಾ ಸಿಬ್ಬಂದಿ ಮೇಲೆ ವಿಶೇಷ ನಿಗಾ ಇಡುವಂತೆ ಹೇಳುತ್ತಿದ್ದನು. ನಮ್ಮ ಕೋಚ್‌ನಿಂದ ಕನಿಷ್ಠ 11 ಸಿಬ್ಬಂದಿಯನ್ನು ಕೆಳಗಿಸಿದ್ದರು’ ಎಂದು ಹೇಳಿದರು.

‘ಈ ವೇಳೆ ಒಬ್ಬ ವ್ಯಕ್ತಿ ಕೆಳಗಿಳಿಯಲು ನಿರಾಕರಿಸಿದ್ದು, ಆತನಿಗೆ ಚಿತ್ರಹಿಂಸೆ ನೀಡಿ ಕೆಳಗಿಸಿದ್ದರು. ಸ್ವಲ್ಪ ಹೊತ್ತಿನಲ್ಲಿ ಗುಂಡಿನ ಶಬ್ದವೊಂದು ಕೇಳಿಬಂತು. ಅದಾದ ಬಳಿಕ ಬೋಗಿಯಲ್ಲಿದ್ದವರೆಲ್ಲ ಉಗ್ರರ ಮಾತುಗಳನ್ನು ಅನುಸರಿಸಿದರು’ ಎಂದರು.

‘ಮಕ್ಕಳು–ಮಹಿಳೆಯರು–ವೃದ್ಧರನ್ನು ಬಿಟ್ಟಿದ್ದ ಉಗ್ರರು’

ಮತ್ತೊಬ್ಬ ಪ್ರಯಾಣಿಕ ಮೊಹಮ್ಮದ್‌ ಮುಶ್ತಾಫ್‌ ಮಾತನಾಡಿ, ‘ಉಗ್ರರು ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ಬಲೂಚಿಸ್ತಾನ ನಾಗರಿಕರಿಗೆ ಹೋಗಲು ಬಿಟ್ಟಿದ್ದರು. ನಾವು ತುಂಬಾ ದಣಿದಿದ್ದರಿಂದ ಮತ್ತು ನಮ್ಮ ಜೊತೆ ಮಕ್ಕಳು ಮತ್ತು ಮಹಿಳೆಯರು ಇದ್ದದ್ದರಿಂದ ಹತ್ತಿರದ ಪನೀರ್ ನಿಲ್ದಾಣ ತಲುಪುವ ವೇಳೆಗೆ ಸಂಜೆಯಾಗಿತ್ತು’ ಎಂದರು.

‘ಈ ವೇಳೆ ಹೆಚ್ಚಿನವರು ತಮ್ಮ ಲಗೇಜ್‌ ಅನ್ನು ರೈಲಿನಲ್ಲಿ ಬಿಟ್ಟರೆ, ಕೆಲವರು ತಮ್ಮ ಜೊತೆ ತೆಗೆದುಕೊಂಡು ಬಂದಿದ್ದರು’ ಎಂದು ಹೇಳಿದರು.

‘ಪ್ರಯಾಣಿಕರು ತುಂಬಾ ಭಯಗೊಂಡಿದ್ದರು. ನಿಜಕ್ಕೂ ಇದು ಪ್ರಳಯ ಸದೃಶವಾಗಿತ್ತು’ ಎಂದರು.

‘ನನ್ನ ಅಂದಾಜಿನ ಪ್ರಕಾರ ಉಗ್ರರು ಸುಮಾರು 250 ಜನರನ್ನು ತಮ್ಮ ಜೊತೆ ಕೊಂಡೊಯ್ದಿದ್ದಾರೆ. ಉಗ್ರರ ಸಂಖ್ಯೆಯೂ ಸಾವಿರದ ಮೇಲಿತ್ತು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.