ADVERTISEMENT

ಹಣ ಅಕ್ರಮ ವರ್ಗಾವಣೆ: ಪಾಕ್‌ ಪ್ರಧಾನಿ, ಅವರ ಪುತ್ರ ದೋಷಮುಕ್ತ

​ಪ್ರಜಾವಾಣಿ ವಾರ್ತೆ
Published 10 ಮೇ 2023, 19:30 IST
Last Updated 10 ಮೇ 2023, 19:30 IST
ಶೆಹಬಾಜ್‌ ಷರೀಫ್
ಶೆಹಬಾಜ್‌ ಷರೀಫ್   

ಇಸ್ಲಾಮಾದ್‌: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್ ಮತ್ತು ಅವರ ಪುತ್ರ ಹಮ್ಜ ಅವರನ್ನು ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಳ (ಎನ್‌ಎಬಿ) ಆರೋಪ ಮುಕ್ತಗೊಳಿಸಿರುವುದಾಗಿ ಬುಧವಾರ ಮಾಧ್ಯಮ ವರದಿ ಹೇಳಿದೆ. 

ಪ್ರಕರಣದ ಮರು ತನಿಖೆ ನಡೆಸಿದ ನಂತರ ಎನ್‌ಎಬಿಯು, ತಂದೆ– ಮಗ ಇಬ್ಬರೂ ಈ ಪ್ರಕರಣದಲ್ಲಿ ‘ಮುಗ್ದರು’. ಈ ಪ್ರಕರಣದಲ್ಲಿ ಪ್ರಧಾನಿ ಮತ್ತು ಅವರ ಕುಟುಂಬದವರು ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷಿ ಇಲ್ಲವೆಂದು ಎನ್‌ಎಬಿಯು, ಭ್ರಷ್ಟಾಚಾರ ವಿರೋಧಿ ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ಹೇಳಿದೆ ಎಂದೂ ‘ಸಮಾ ಟಿ.ವಿ’ ತನ್ನ ವೆಬ್‌ಸೈಟ್‌ನಲ್ಲಿ ವರದಿ ಮಾಡಿದೆ. 

ಪ್ರಧಾನಿ ಶೆಹಬಾಜ್‌ ಮತ್ತು ಅವರ ಪತ್ನಿ ನುಸ್ರತ್‌ ಶೆಹಬಾಜ್‌, ಪುತ್ರ ಹಮ್ಜ ಶೆಹಬಾಜ್‌ ಹಾಗೂ ಇತರರು ಹಣ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿರುವುದಾಗಿ ಆರೋಪಿಸಿ, ಭ್ರಷ್ಟಾಚಾರ ನಿಗ್ರಹ ದಳವು 2020ರಲ್ಲಿ ಪ್ರಕರಣ ದಾಖಲಿಸಿತ್ತು. 

ADVERTISEMENT

ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶ ಖಮರ್‌ ಉಲ್‌ ಜಮಾನ್‌ ನಡೆಸುತ್ತಿದ್ದು, ಬುಧವಾರ ನಡೆದ ವಿಚಾರಣೆ ವೇಳೆ ಹಮ್ಜ ಶೆಹಬಾಜ್ ಅವರು ವೈದ್ಯಕೀಯ ಕಾರಣಗಳಿಗಾಗಿ ಖುದ್ದು ಹಾಜರಿಗೆ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದರು. ಇದನ್ನು ಕೋರ್ಟ್‌ ಮಾನ್ಯ ಮಾಡಿತು.    

ನ್ಯಾಯಾಲಯವು ವಿಚಾರಣೆಯನ್ನು ಮೇ 24ರವರೆಗೆ ಮುಂದೂಡಿತು. ಪ್ರಧಾನಿಯ ಅಳಿಯ ಹರೂನ್‌ ಯೂಸುಫ್‌ ಅಜೀಜ್‌ ಮತ್ತು ಸಹ ಆರೋಪಿ ಸೈಯದ್ ಮುಹಮ್ಮದ್ ತಾಹಿರ್ ನಖ್ವಿ ಅವರಿಗೆ ಮೇ 24ರವರೆಗೆ ಮಧ್ಯಂತರ ಜಾಮೀನು ವಿಸ್ತರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.