ADVERTISEMENT

ಕಪೂರ್‌, ದಿಲೀಪ್‌ ಪೂರ್ವಿಕರ ಮನೆ ಖರೀದಿಗೆ ಮುಂದಾದ ಕೈಬರ್‌ ಸರ್ಕಾರ

ಪಿಟಿಐ
Published 27 ಸೆಪ್ಟೆಂಬರ್ 2020, 19:55 IST
Last Updated 27 ಸೆಪ್ಟೆಂಬರ್ 2020, 19:55 IST
ಹಿಂದಿ ಚಿತ್ರನಟರಾದ ರಾಜ್‌ ಕಪೂರ್ ಮತ್ತು ದಿಲೀಪ್‌ ಕುಮಾರ್ (ಸಂಗ್ರಹ ಚಿತ್ರ)
ಹಿಂದಿ ಚಿತ್ರನಟರಾದ ರಾಜ್‌ ಕಪೂರ್ ಮತ್ತು ದಿಲೀಪ್‌ ಕುಮಾರ್ (ಸಂಗ್ರಹ ಚಿತ್ರ)   

ಪೇಶಾವರ: ಪಾಕಿಸ್ತಾನದ ಕೈಬರ್‌ ಪಕ್ತುಂಖ್ವಾ ಪ್ರಾಂತೀಯ ಸರ್ಕಾರವು ಭಾರತೀಯ ಸಿನಿಮಾ ದಿಗ್ಗಜರಾದ ರಾಜ್‌ ಕಪೂರ್‌ ಹಾಗೂ ದಿಲೀಪ್‌ ಕುಮಾರ್‌ ಅವರ ಪೂರ್ವಿಕರ ಮನೆಗಳನ್ನು ಖರೀದಿಸಲು ನಿರ್ಧರಿಸಿದೆ.

‘ಪೇಶಾವರ ನಗರದ ಹೃದಯ ಭಾಗದಲ್ಲಿರುವ ಈ ಎರಡೂ ಕಟ್ಟಡಗಳನ್ನು ರಾಷ್ಟ್ರೀಯ ಸ್ಮಾರಕಗಳೆಂದು ಘೋಷಿಸಲಾಗಿದೆ. ಇವುಗಳನ್ನು ಖರೀದಿಸಲು ಅಗತ್ಯವಿರುವ ಹಣ ಬಿಡುಗಡೆ ಮಾಡಲು ಕೈಬರ್‌ ಪ್ರಾಂತ್ಯದ ಪುರಾತತ್ವ ಇಲಾಖೆ ಮುಂದಾಗಿದೆ. ಈ ಸಂಬಂಧ ಪೇಶಾವರದ ಜಿಲ್ಲಾಧಿಕಾರಿಗೆ ಪತ್ರವನ್ನೂ ರವಾನಿಸಲಾಗಿದೆ’ ಎಂದು ಪುರಾತತ್ವ ಇಲಾಖೆಯ ಮುಖ್ಯಸ್ಥ ಡಾ.ಅಬ್ದುಸ್‌ ಸಮದ್‌ ಖಾನ್ ತಿಳಿಸಿದ್ದಾರೆ.

ಕಿಸ್ಸಾ ಖ್ವಾನಿ ಬಜಾರ್‌ನಲ್ಲಿರುವ ಕಪೂರ್‌ ಹವೇಲಿಯನ್ನು 1918 ರಿಂದ 1922ರ ಅವಧಿಯಲ್ಲಿ ದಿವಾನ್‌ ಬಸೇಶ್ವರನಾಥ್‌ ಕಪೂರ್‌ ಅವರು ನಿರ್ಮಿಸಿದ್ದರು. ಈ ಕಟ್ಟಡದಲ್ಲೇ ರಾಜ್‌ ಕಪೂರ್‌ ಮತ್ತು ಅವರ ಚಿಕ್ಕಪ್ಪ ತ್ರಿಲೋಕ್‌ ಕಪೂರ್‌ ಜನಿಸಿದ್ದರು. ಅಲ್ಲೇ ತಮ್ಮ ಬಾಲ್ಯದ ದಿನಗಳನ್ನು ಕಳೆದಿದ್ದರು. ದಿಲೀಪ್‌ ಅವರ ಪೂರ್ವಿಕರು ವಾಸವಿದ್ದ ಶತಮಾನದಷ್ಟು ಹಳೆಯದಾದ ಕಟ್ಟಡವು ಇದೇ ಭಾಗದಲ್ಲಿದೆ.

ADVERTISEMENT

ಕಪೂರ್‌ ಹವೇಲಿಯ ಮಾಲೀಕತ್ವ ಹೊಂದಿರುವ ಅಲಿ ಕ್ವಾದರ್‌ ಅವರು ಈ ಕಟ್ಟಡವನ್ನು ಸರ್ಕಾರದ ಸುಪರ್ದಿಗೆ ನೀಡಲು ಒಪ್ಪಿದ್ದು, ಇದಕ್ಕಾಗಿ ₹200 ಕೋಟಿಯ ಬೇಡಿಕೆ ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.