ADVERTISEMENT

ಅಮೆರಿಕದ ಬಾಂಧವ್ಯಕ್ಕೆ ಚೀನಾ ತಿಲಾಂಜಲಿ: ತೈವಾನ್‌ ಸುತ್ತ ಸೇನಾ ತಾಲೀಮು ತೀವ್ರ

ನ್ಯಾನ್ಸಿ ಪೆಲೋಸಿ, ಕುಟುಂಬ ಸದಸ್ಯರಿಗೆ ನಿರ್ಬಂಧ

ಏಜೆನ್ಸೀಸ್
Published 5 ಆಗಸ್ಟ್ 2022, 16:10 IST
Last Updated 5 ಆಗಸ್ಟ್ 2022, 16:10 IST
ಚೀನಾ ಸೇನೆ ಗುರುವಾರ ಕ್ಷಿಪಣಿ ಪ್ರಯೋಗ ನಡೆಸಿತು – ಎಪಿ/ಪಿಟಿಐ ಚಿತ್ರ
ಚೀನಾ ಸೇನೆ ಗುರುವಾರ ಕ್ಷಿಪಣಿ ಪ್ರಯೋಗ ನಡೆಸಿತು – ಎಪಿ/ಪಿಟಿಐ ಚಿತ್ರ   

ಬೀಜಿಂಗ್‌: ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರತೈವಾನ್‌ ಭೇಟಿಗೆ ಪ್ರತೀಕಾರವಾಗಿ ದ್ವೀಪದ ಮೇಲೆ ವ್ಯಾಪಾರ ನಿರ್ಬಂಧ ಹೇರಿದ್ದ ಚೀನಾ, ಅಮೆರಿಕದೊಂದಿಗೆ ಹವಾಮಾನ, ರಕ್ಷಣಾ ಕ್ಷೇತ್ರದಲ್ಲಿನ ಸಹಕಾರ ಸಂಬಂಧವನ್ನು ಶುಕ್ರವಾರ ಕೊನೆಗೊಳಿದೆ. ಅಲ್ಲದೇ, ಪೆಲೋಸಿ ಮತ್ತು ಅವರ ಕುಟುಂಬಕ್ಕೂ ನಿರ್ಬಂಧ ಹೇರಿದೆ.

ಅಮೆರಿಕದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಚೀನಾ, ತೈವಾನ್‌ ದ್ವೀಪ ತನ್ನ ಅವಿಭಾಜ್ಯ ಅಂಗ. ಅಗತ್ಯಬಿದ್ದರೆ ಅದನ್ನು ವಶಕ್ಕೆ ಪಡೆಯುವ ಪ್ರತಿಜ್ಞೆ ಮಾಡಿರುವುದಾಗಿ ಘೋಷಿಸಿದೆ.

ಹವಾಮಾನ ಬದಲಾವಣೆ, ಮಾದಕ ವಸ್ತು ನಿಗ್ರಹ, ಭದ್ರತೆ ಸಂಬಂಧ ಉಭಯ ದೇಶಗಳ ನಡುವಿನ ಹಲವು ಒಪ್ಪಂದಗಳ ಕುರಿತ ಮಾತುಕತೆ, ಅಕ್ರಮ ವಲಸಿಗರ ವಾಪಸಾತಿ, ಬಹುರಾಷ್ಟ್ರೀಯ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಪರಸ್ಪರ ಸಹಕಾರ, ಉಭಯ ಸೇನೆಗಳ ಮುಖ್ಯಸ್ಥರ ಮಾತುಕತೆ ಸ್ಥಗಿತಗೊಳಿಸಿರುವುದಾಗಿ ಚೀನಾ ವಿದೇಶಾಂಗ ಸಚಿವಾಲಯ ಘೋಷಿಸಿದೆ.

ADVERTISEMENT

ಅಮೆರಿಕದ ರಾಯಭಾರಿ ಕ್ರಿಸ್‌ ಬರ್ನ್ಸ್‌ ಅವರನ್ನು ಕರೆಸಿಕೊಂಡು, ಪೆಲೋಸಿ ಅವರ ಭೇಟಿ ಖಂಡಿಸಿ ತೀವ್ರ ಪ್ರತಿಭಟನೆ ದಾಖಲಿಸಿರುವ ಚೀನಾ ವಿದೇಶಾಂಗ ಸಚಿವಾಲಯ, ತಮ್ಮ ಗಂಭೀರ ಕಳವಳ ಮತ್ತು ದೃಢ ವಿರೋಧವನ್ನು ಲೆಕ್ಕಿಸದ ಪೆಲೋಸಿ ಮತ್ತು ಅವರ ಕುಟುಂಬದವರಿಗೆ ತೈವಾನ್‌ ದ್ವೀಪವೂ ಸೇರಿ ತನ್ನ ದೇಶಕ್ಕೆ ಕಾಲಿಡದಂತೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದೆ.

‘ಅಮೆರಿಕವು ‘ಒಂದೇ ಚೀನಾ ನೀತಿ’ ಉಲ್ಲಂಘಿಸಿ, ದೇಶದ ಆಂತರಿಕ ವಿಷಯದಲ್ಲಿ ಮೂಗು ತೂರಿಸಿ, ಗಡಿ ಸಾರ್ವಭೌಮತೆಗೆ ಧಕ್ಕೆ ತಂದಿದೆ’ ಎಂದು ವ್ಯಗ್ರಗೊಂಡಿರುವ ಚೀನಾ, ಈ ನಿರ್ಬಂಧ ಕ್ರಮ ಸಾಂಕೇತಿಕ ಎನ್ನುವ ಮೂಲಕ, ಇನ್ನಷ್ಟು ಕಠಿಣ ನಿರ್ಬಂಧಗಳನ್ನು ಹೇರುವ ಸುಳಿವು ನೀಡಿದೆ. ಈ ಹಿಂದೆ ಟ್ರಂಪ್‌ ಆಡಳಿತದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಮೈಕ್‌ ಪಾಂಪಿಯೊ ಸೇರಿ 28 ಮಂದಿಗೆ ಚೀನಾ ನಿರ್ಬಂಧ ಹೇರಿತ್ತು.

ತೈವಾನ್‌ ಸುತ್ತ ಯುದ್ಧ ವಿಮಾನಗಳು, ಸಮರ ನೌಕೆಗಳು, ಕ್ಷಿಪಣಿ ಪಡೆಗಳನ್ನು ನಿಯೋಜಿಸಿ ಕಳೆದ ಎರಡು ದಿನಗಳಿಂದ ನಡೆಸುತ್ತಿರುವ ಸಂಪೂರ್ಣ ಸೇನಾ ತಾಲೀಮಿಗೆ ಮತ್ತೆ ನೂರಕ್ಕೂ ಹೆಚ್ಚು ಯುದ್ಧ ವಿಮಾನಗಳು ಮತ್ತು ಹತ್ತು ಯುದ್ಧನೌಕೆಗಳನ್ನು ನಿಯೋಜಿಸುವುದಾಗಿ ಸೇನೆ ಹೇಳಿದೆ.

ತೈವಾನ್‌ ಮತ್ತು ಜಪಾನ್‌ ಸಮುದ್ರ ತೀರಗಳನ್ನು ಗುರಿಯಾಗಿಸಿ ಚೀನಾ ಪೀಪ‍ಲ್‌ ಲಿಬರೇಷನ್‌ ಆರ್ಮಿ ಗುರುವಾರ ಡಾಂಗ್‌ ಫೆಂಗ್‌ ದರ್ಜೆಯ ಸರಣಿ ಕ್ಷಿಪಣಿಗಳನ್ನು ಪ್ರಯೋಗಿಸಿತ್ತು. ಶುಕ್ರವಾರ ಕೂಡ ತೈವಾನ್‌ ಕೇಂದ್ರವಾಗಿರಿಸಿಕೊಂಡು ಮತ್ತಷ್ಟು ಹೊಸ ಅವತರಿಣಿಕೆಯ ಕ್ಷಿಪಣಿಗಳನ್ನು ಪ್ರಯೋಗಿಸಿದೆ.

ತೈವಾನ್‌ ಕರಾವಳಿಯ ಆರು ವಲಯಗಳಲ್ಲಿ ನಡೆಯುತ್ತಿರುವ ‘ಜಂಟಿ ನಿರ್ಬಂಧದ ಕಾರ್ಯಾಚರಣೆ’ಗಳಲ್ಲಿ ಸೇನೆ, ಬಾಂಬರ್‌ ವಿಮಾನಗಳು, ಕ್ಷಿಪಣಿಗಳು, ಯುದ್ಧನೌಕೆಗಳನ್ನು ಬಳಸಲಾಗಿದೆ. ತೈವಾನ್‌ ಮೇಲೆ ಗುರುತಿಸಲಾಗದ ಗುರಿಗಳ ಮೇಲೆ ಹೊಸ ಆವೃತ್ತಿಯ ನಿಖರ ಕ್ಷಿಪಣಿಗಳನ್ನು ಉಡಾಯಿಸಿತು.ತೈವಾನಿನ ಮೇಲೆ ಪೆಸಿಫಿಕ್‌ನಿಂದಲೂ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಸೇನೆ ಮಾಹಿತಿ ಉಲ್ಲೇಖಿಸಿ ಷಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚೀನಾದ ಈ ನಡೆಗೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ತೀವ್ರ ಕಿಡಿಕಾರಿವೆ.

ತೈವಾನ್ ಪ್ರತ್ಯೇಕಿಸಲು ಬಿಡೆವು: ಪೆಲೋಸಿ
ಟೋಕಿಯೊ (ಎಪಿ):
ಚೀನಾ ಪ್ರವಾಸ ನಿರ್ಬಂಧಿಸುವ ಮೂಲಕ ತೈವಾನ್ ಅನ್ನು ಪ್ರತ್ಯೇಕವಾಗಿರಿಸುವುದು ಅಸಾಧ್ಯ ಎಂದು ಅಮೆರಿಕ ಸಂಸತ್‌ ಸ್ಪೀಕರ್ ನ್ಯಾನ್ಸಿ ಪೆಲೋಸಿ ಶುಕ್ರವಾರ ಚೀನಾದ ಕ್ರಮಕ್ಕೆ ತಿರುಗೇಟು ನೀಡಿದ್ದಾರೆ.

ಜಪಾನ್‌ ರಾಜಧಾನಿಟೋಕಿಯೊದಲ್ಲಿ ಮಾತನಾಡಿರುವ ಪೆಲೋಸಿ ಅವರು, ‘ಅವರು (ಚೀನಾ) ತೈವಾನ್‌ ಪ್ರಜೆಗಳನ್ನು ಇತರ ಪ್ರದೇಶಗಳಿಗೆ ತೆರಳದಂತೆ ಅಥವಾ ಇತರ ದೇಶಗಳ ಜತೆ ಬಾಂಧವ್ಯ ಸಾಧಿಸದಂತೆ ತಡೆಯಲು ಯತ್ನಿಸಬಹುದು. ಆದರೆ, ಅವರು ತೈವಾನ್ ಅನ್ನು ವಿಶ್ವ ಸಮುದಾಯದಿಂದ ಪ್ರತ್ಯೇಕಿಸಲು ನಾವು ಬಿಡುವುದಿಲ್ಲ. ತೈವಾನ್‌ಗೆ ನಾವು ಹಲವು ಬಾರಿ ಭೇಟಿ ನೀಡಿದ್ದೇವೆ. ಇಂತಹ ಭೇಟಿಗಳು ಮುಂದುವರಿಯಲಿದೆ’ ಚೀನಾಕ್ಕೆ ಸಡ್ಡುಹೊಡೆದಿದ್ದಾರೆ.

ಚೀನಾ– ತೈವಾನ್‌ ಸಂಘರ್ಷದ ಬೆಳವಣಿಗೆ
* ಪೆಲೋಸಿ ಭೇಟಿಯಿಂದತೈವಾನ್‌ ದ್ವೀಪದ ಸುತ್ತ ಸೃಷ್ಟಿಸಿರುವ ಉದ್ವಿಗ್ನತೆಯನ್ನು ಚೀನಾ ಶಾಂತಿಯುತವಾಗಿ ಬಗೆಹರಿಸಬೇಕೆಂದು ಜಿ 7 ರಾಷ್ಟ್ರಗಳು ಕರೆ ನೀಡಿರುವುದನ್ನು ಖಂಡಿಸಿರುವ ಚೀನಾ, ಬೀಜಿಂಗ್‌ನಲ್ಲಿರುವ ಕೆನಡಾ ರಾಜತಾಂತ್ರಿಕ ಜಿಮ್ ನಿಕ್ಕಲ್ ಅವರಿಗೆ ಸಮನ್ಸ್ ನೀಡಿದೆ. ಹೇಳಿಕೆ ಬದಲಿಸುವಂತೆ ಚೀನಾ ಒತ್ತಡ ಹೇರಿದೆ.

*ತೈವಾನ್ ಸುತ್ತ ಕ್ಷಿಪಣಿಗಳ ಉಡಾವಣೆ ಅಕ್ರಮ ಮತ್ತು ಅಸಮಂಜಸ. ನ್ಯಾಯಯುತವಲ್ಲದ ಈ ಕ್ರಮ ತೈವಾನ್‌ ಭದ್ರತೆಗೆ ಕಳವಳಕಾರಿ. ಅಮೆರಿಕ ತೈವಾನ್‌ ಬಿಕ್ಕಟ್ಟು ಬಯಸುತ್ತಿಲ್ಲವೆಂದು ಚೀನಾಕ್ಕೆ ಪದೇ ಪದೇ ಸ್ಪಷ್ಟಪಡಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್‌ ಅವರು ಆಸಿಯಾನ್‌ ಪ್ರಾದೇಶಿಕ ಸಮಾವೇಶದಲ್ಲಿಚೀನಾ ಸೇನೆ ವಿರುದ್ಧ ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.