ADVERTISEMENT

ಉಕ್ರೇನ್ ಮೇಲೆ ರಷ್ಯಾ ದಾಳಿ: ಭಾರತದ ನಿಲುವು ಪೆಂಟಗನ್‌ಗೆ ಮನವರಿಕೆ

ವಿಶ್ವಸಂಸ್ಥೆ ಸಭೆಯಲ್ಲಿ ಮತಚಲಾವಣೆಯಿಂದ ದೂರ ಉಳಿದಿದ್ದ ಭಾರತ

ಪಿಟಿಐ
Published 10 ಮಾರ್ಚ್ 2022, 11:26 IST
Last Updated 10 ಮಾರ್ಚ್ 2022, 11:26 IST
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ (ಸಾಂದರ್ಭಿಕ ಚಿತ್ರ) – ರಾಯಿಟರ್ಸ್‌ ಚಿತ್ರ
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ (ಸಾಂದರ್ಭಿಕ ಚಿತ್ರ) – ರಾಯಿಟರ್ಸ್‌ ಚಿತ್ರ   

ವಾಷಿಂಗ್ಟನ್: ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸಿದ್ದಕ್ಕೆ ಸಂಬಂಧಿಸಿ ನಿರ್ಣಯ ಕೈಗೊಳ್ಳಲು ವಿಶ್ವಸಂಸ್ಥೆ ಆಯೋಜಿಸಿದ್ದ ಸಭೆಯಲ್ಲಿ ಮತ ಚಲಾಯಿಸುವುದರಿಂದ ಭಾರತ ಏಕೆ ದೂರ ಉಳಿಯಿತು ಎಂಬುದು ಅಮೆರಿಕದ ರಕ್ಷಣಾ ಇಲಾಖೆಗೆ (ಪೆಂಟಗನ್) ಅರ್ಥವಾಗಿದೆ.

ಆದರೆ, ಈ ಬಗ್ಗೆ ಅಮೆರಿಕದ ಸಂಸದೀಯ ಸಮಿತಿಗೆ ಮನವರಿಕೆ ಮಾಡಿಕೊಡಲು ರಕ್ಷಣಾ ಇಲಾಖೆ ಅಧಿಕಾರಿಗಳು ಕಷ್ಟಪಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಸಮಿತಿಯು ‘ಇಂಡೊ–ಪೆಸಿಫಿಕ್‌ ಪ್ರದೇಶ’ಕ್ಕೆ ಸಂಬಂಧಿಸಿದ ವಿದ್ಯಮಾನಗಳ ಕುರಿತು ವಿಚಾರಣೆ ನಡೆಸಿತ್ತು.

ADVERTISEMENT

‘ಭಾರತ ಹಾಗೂ ರಷ್ಯಾ ಸಂಬಂಧಕ್ಕೆ ದೊಡ್ಡ ಇತಿಹಾಸವೇ ಇದ್ದು, ಉಭಯ ದೇಶಗಳ ಸಂಬಂಧ ಸಂಕೀರ್ಣವೂ ಆಗಿದೆ’ ಎಂದು ಇಂಡೊ–ಪೆಸಿಫಿಕ್ ಭದ್ರತಾ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಎಲಿ ರ‍್ಯಾಟ್ನರ್ ಅವರು ಸಮಿತಿಗೆ ತಿಳಿಸಿದರು.

‘ಭಾರತವು ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ರಷ್ಯಾದಿಂದಲೇ ಖರೀದಿಸುತ್ತಿದೆ. ಈಗ ದೇಶೀಯವಾಗಿಯೇ ಶಸ್ತ್ರಾಸ್ತ್ರಗಳ ಉತ್ಪಾದನೆಗೆ ಒತ್ತು ನೀಡುತ್ತಿರುವ ಭಾರತ, ಆ ಮೂಲಕ ರಕ್ಷಣಾ ಖರೀದಿ ವಿಷಯದಲ್ಲಿ ರಷ್ಯಾ ಮೇಲಿನ ಅವಲಂಬನೆ ತಗ್ಗಿಸಲು ಮುಂದಾಗಿದೆ. ಇದಕ್ಕೆ ಸಮಯ ಬೇಕಾಗುತ್ತದೆ’ ಎಂದೂ ಅವರು ಹೇಳಿದರು.

ಆದರೆ, ಈ ವಿಷಯವಾಗಿ ರಕ್ಷಣಾ ಇಲಾಖೆ ನೀಡಿರುವ ವಿವರಣೆ ತೃಪ್ತಿ ತಂದಿಲ್ಲ ಎಂದು ಭಾರತೀಯ ಅಮೆರಿಕನ್‌ ಸಂಸದ ರೊ ಖನ್ನಾ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.