ADVERTISEMENT

51 ಪ್ರಯಾಣಿಕರ ಅಂತ್ಯಕ್ಕೆ ಕಾರಣ ಪೈಲಟ್‌ ಹೊತ್ತಿಸಿದ ಸಿಗರೇಟ್‌!

ಏಜೆನ್ಸೀಸ್
Published 28 ಜನವರಿ 2019, 3:01 IST
Last Updated 28 ಜನವರಿ 2019, 3:01 IST
   

ಕಠ್ಮಂಡು(ನೇಪಾಳ): ವಿಮಾನದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಪೈಲಟ್‌, ನಿರ್ಬಂಧಗಳ ನಡುವೆಯೂ ಕಾಕ್‌ಪಿಟ್‌ನಲ್ಲಿಯೇ ಧೂಮಪಾನ ಮಾಡಿರುವುದು ಯುಎಸ್–ಬಾಂಗ್ಲಾ ಏರ್‌ಲೈನ್ಸ್‌ ವಿಮಾನ ದುರಂತಕ್ಕೆ ಕಾರಣಎಂದು ತಿಳಿದು ಬಂದಿದೆ.

ಕಠ್ಮಂಡುವಿನ ತ್ರಿಭುವನ್‌ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ(ಟಿಐಎ) ಯುಎಸ್–ಬಾಂಗ್ಲಾ ವಿಮಾನಯಾನ ಸಂಸ್ಥೆಯ ಯುಬಿಜಿ–211 ವಿಮಾನ 2018ರ ಮಾರ್ಚ್ 12ರಂದು ಪತನಗೊಂಡಿತ್ತು. ಈ ದುರಂತದಲ್ಲಿ 51 ಮಂದಿ ಸಾವಿಗೀಡಾಗಿದ್ದರು.

ಈ ವಿಮಾನಯಾನ ಸಂಸ್ಥೆಯ ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲ ಎಂಬ ನಿಯಮ ಹೊಂದಿದೆ. ವಿಮಾನ ದುರಂತದ ತನಿಖೆ ನಡೆಸುತ್ತಿದ್ದ ಆಯೋಗವು, ಪೈಲಟ್‌ ಇನ್‌ ಕಮಾಂಡ್‌(ಪಿಕ್‌) ಧೂಮಪಾನ ನಡೆಸಿರುವುದನ್ನು ದೃಢಪಡಿಸಿದೆ. ಕಾಕ್‌ಪಿಟ್‌ ಧ್ವನಿ ಸಂಗ್ರಹದ ಪರಿಶೀಲನೆ ನಡೆಸಿರುವ ತನಿಖಾ ತಂಡ; ವಿಮಾನಯಾನದ ಸಂದರ್ಭದಲ್ಲಿ ಕಾಕ್‌ಪಿಟ್‌ನಲ್ಲಿ ಪೈಲಟ್‌ ಧೂಮಪಾನ ಮಾಡಿರುವುದಾಗಿ ಸಾಬೀತಾಗಿದೆ ಎಂದು ತಿಳಿಸಿದೆ.

ADVERTISEMENT

ಆದರೆ, ಪೈಲಟ್‌ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಕಾರ್ಯನಿರ್ವಹಣಾ ವಿಭಾಗ ಹಾಗೂ ಇತರೆ ವಿಭಾಗಗಳು ಪೂರ್ಣ ಮಾಹಿತಿ ಹೊಂದಿಲ್ಲ. ಪತನಗೊಂಡ ವಿಮಾನದಲ್ಲಿ 67 ಪ್ರಯಾಣಿಕರು ಮತ್ತು 4 ಸಿಬ್ಬಂದಿ ಇದ್ದರು. 31 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು.

ವಿಮಾನಯಾನದ ಸಮಯದಲ್ಲಿ ತಂಬಾಕು ಪದಾರ್ಥ ಬಳಕೆ ಮಾಡಲಾಗಿದ್ದು, ಇನ್ನಾವುದೇ ನಿಷೇಧಿತ ವಸ್ತುಗಳ ಸೇವನೆ ನಡೆದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪರಿಸ್ಥಿತಿಯನ್ನು ಅರಿತುಕೊಳ್ಳುವಲ್ಲಿ ಸಿಬ್ಬಂದಿ ವಿಫಲತೆ ಹಾಗೂ ದಿಕ್ಕು ತೋಚದೆ ಸುಮ್ಮನಾದುದು ಪ್ರಯಾಣಿಕರ ಸಾವಿಗೆ ಕಾರಣ ಎಂದು ತನಿಖಾ ಆಯೋಗ ಅಭಿಪ್ರಾಯ ಪಟ್ಟಿದೆ. ನೇಪಾಳದ ಪ್ರವಾಸೋದ್ಯಮ, ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಆಯೋಗ ತನಿಖಾ ವರದಿ ಸಲ್ಲಿಸಿದೆ.

ದುರಂತದಲ್ಲಿ ಸಾವಿಗೀಡ ಪ್ರಯಾಣಿಕರ ಶವಗಳ ಪರೀಕ್ಷೆ ನಡೆಸಿರುವ ಕಠ್ಮಂಡು ವಿಧಿವಿಜ್ಞಾನ ಇಲಾಖೆ, ತಲೆಗೆ ಬಲವಾದ ಹೊಡೆತಬಿದ್ದಿರುವುದರಿಂದ ಪ್ರಯಾಣಿಕರು ಮೃತಪಟ್ಟಿರುವುದಾಗಿ ವರದಿ ನೀಡಿದೆ. ವಿಮಾನ ಸಿಬ್ಬಂದಿ ಅಜಾಗರೂಕತೆ ಹಾಗೂ ನೈಸರ್ಗಿಕ ಕಾರಣಗಳಿಂದಾಗಿ ವಿಮಾನ ಪತನಗೊಂಡಿದೆ ಎಂದು ವರದಿ ಹೇಳಿದೆ.

ಬಾಂಗ್ಲಾದೇಶದ ಢಾಕಾದಿಂದ ಕಠ್ಮಂಡುಗೆ ಬಂದಿದ್ದ ವಿಮಾನ ಮಧ್ಯಾಹ್ನ 2.20ಕ್ಕೆ ಭೂ ಸ್ಪರ್ಶ ಮಾಡಿತ್ತು. ಭೂ ಸ್ಪರ್ಶ ಮಾಡುವ ವೇಳೆ ವಿಮಾನವು ರನ್‌ವೇಯಿಂದ ಜಾರಿ ಬೆಂಕಿ ಹೊತ್ತಿಕೊಂಡಿತ್ತು. ನಿಲ್ದಾಣದ ಪಕ್ಕದಲ್ಲಿರುವ ಫುಟ್‌ಬಾಲ್ ಮೈದಾನದಲ್ಲಿ ವಿಮಾನ ಪತನವಾಗಿತ್ತು. ವಿಮಾನ ರನ್‌ವೇಯಲ್ಲಿ ಇಳಿಯಲು ಅನುಸರಿಸಿದ ಎತ್ತರ ಹಾಗೂ ಪಾಲನೆಯಾಗದ ನಿಯಮಗಳ ನಡುವೆಯೂ ವಿಮಾನ ರನ್‌ವೇಗೆ ಬಂದರೂ ಪ್ರಯಾಣಿಕರು ಪ್ರಯಾಣ ಮುಂದುವರಿಸಲು ಆಗಲೇ ಇಲ್ಲ.

ವಿಮಾನದಲ್ಲಿದ್ದ 67 ಜನರ ಪೈಕಿ ಇಬ್ಬರು ಕಾಕ್‌‍ಪಿಟ್‌ ಸಿಬ್ಬಂದಿ, ಇಬ್ಬರು ಕ್ಯಾಬಿನ್‌ ಸಿಬ್ಬಂದಿ ಹಾಗೂ 45 ಪ್ರಯಾಣಕರು ಸಾವಿಗೀಡಾದರು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಪ್ರಯಾಣಿಕರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.