ADVERTISEMENT

ಕಜಕಿಸ್ತಾನದಲ್ಲಿ ವಿಮಾನ ಪತನ: 12 ಸಾವು

ಏಜೆನ್ಸೀಸ್
Published 28 ಡಿಸೆಂಬರ್ 2019, 2:15 IST
Last Updated 28 ಡಿಸೆಂಬರ್ 2019, 2:15 IST
ನಜ್ಜುಗುಜ್ಜಾಗಿರುವ ಬೆಕ್‌ ಏರ್‌ ಫೋಕರ್‌ 100 ಮಾದರಿ ವಿಮಾನದೊಳಗಿರುವ ಪ್ರಯಾಣಿಕರ ರಕ್ಷಣಾ ಕಾರ್ಯ ನಡೆಯಿತು –ಎಎಫ್‌ಪಿ ಚಿತ್ರ
ನಜ್ಜುಗುಜ್ಜಾಗಿರುವ ಬೆಕ್‌ ಏರ್‌ ಫೋಕರ್‌ 100 ಮಾದರಿ ವಿಮಾನದೊಳಗಿರುವ ಪ್ರಯಾಣಿಕರ ರಕ್ಷಣಾ ಕಾರ್ಯ ನಡೆಯಿತು –ಎಎಫ್‌ಪಿ ಚಿತ್ರ   

ಅಲ್ಮಾಟಿ: ಐವರು ಸಿಬ್ಬಂದಿ ಸೇರಿ 100 ಮಂದಿಯಿದ್ದ ವಿಮಾ ನವೊಂದು ಹಾರಾಟ ಆರಂಭಿಸಿದ ಕೆಲಕ್ಷಣದಲ್ಲೇ ಮನೆಯೊಂದರ ಮೇಲೆ ಪತನವಾಗಿ ಕ್ಯಾಪ್ಟನ್‌ ಸೇರಿ 12 ಜನರು ಮೃತಪಟ್ಟ ಘಟನೆಕಜಕಸ್ತಾನದ ಅಲ್ಮಾಟಿಯಲ್ಲಿ ನಡೆದಿದೆ.

‘ಬೆಕ್‌ ಏರ್‌’ ಸಂಸ್ಥೆಗೆ ಸೇರಿದ 23 ವರ್ಷ ಹಳೆಯ ವಿಮಾನ ಅಲ್ಮಾಟಿ ವಿಮಾನ ನಿಲ್ದಾಣದಿಂದ ರಾಜಧಾನಿ ನೂರ್‌–ಸುಲ್ತಾನ್‌ಗೆ ಸ್ಥಳೀಯ ಸಮಯ ಬೆಳಗ್ಗೆ 7.05ಕ್ಕೆ ಹಾರಾಟ ಆರಂಭಿಸಿತ್ತು. ಟೇಕ್‌ಆಫ್‌ ಆದ ಕೆಲ ನಿಮಿಷಗಳಲ್ಲೇ ರೆಡಾರ್‌ ಸಂಪರ್ಕ ಕಡಿತಗೊಂಡಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ವಿಮಾನ ನಿಲ್ದಾಣದ ಈಶಾನ್ಯ ಕ್ಕಿರುವ ನಗರದ ಹೊರವಲಯದಲ್ಲಿ ಪತನಗೊಂಡ ವಿಮಾನ, ಎರಡು ಅಂತಸ್ತಿನ ಕಟ್ಟಡಕ್ಕೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ವಿಮಾನವು ಸಂಪೂರ್ಣ ಜಖಂ ಆಗಿದೆ. ಘಟನೆ ನಡೆದ ಮರುಕ್ಷಣವೇ ಬೆಕ್‌ ಏರ್‌ನ ಎಲ್ಲ ‘ಪೋಕರ್‌’ ಮಾದರಿ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿರುವ ಕಜಕಸ್ತಾನ ಸರ್ಕಾರವು, ಅವಘಡದ ಕುರಿತು ತನಿಖೆಗೆ ಆದೇಶಿಸಿದೆ.

ADVERTISEMENT

ಅವಘಡಕ್ಕೆ ಕಾರಣ: ಟೇಕ್‌ಆಫ್‌ ಸಂದರ್ಭದಲ್ಲಿ ವಿಮಾನದ ಹಿಂಭಾಗವು ರನ್‌ವೇಗೆ ಎರಡು ಬಾರಿ ಅಪ್ಪಳಿಸಿದೆ ಎಂದು ಉಪಪ್ರಧಾನಿ ರೋಮನ್‌ ಸ್ಕ್ಲಿಯರ್‌ ತಿಳಿಸಿದೆ. ಇದು ಪೈಲೆಟ್‌ ಮಾಡಿದ ತಪ್ಪಾಗಿರಬಹುದು ಅಥವಾ ತಾಂತ್ರಿಕ ಸಮಸ್ಯೆಯಿಂದ ಸಂಭವಿಸಿರಬಹುದು. ಪತನಗೊಂಡ ವಿಮಾನ ಇಬ್ಭಾಗವಾಗಿತ್ತು. ವಿಮಾನದ ಮುಂದಿನ ಭಾಗದಲ್ಲಿದ್ದ ಪ್ರಯಾಣಿಕರ ಪೈಕಿ ಕೆಲವರು ಮೃತಪಟ್ಟಿದ್ದಾರೆ’ ಎಂದು ಸ್ಕ್ಲಿಯರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.