ADVERTISEMENT

ಖಲೀದಾ ಜಿಯಾ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ವಿಶ್ವದ ಗಣ್ಯರ ಸಂತಾಪ

ಪಿಟಿಐ
Published 30 ಡಿಸೆಂಬರ್ 2025, 5:39 IST
Last Updated 30 ಡಿಸೆಂಬರ್ 2025, 5:39 IST
<div class="paragraphs"><p>ಖಲೀದಾ ಜಿಯಾ ಮತ್ತು ಪ್ರಧಾನಿ ನರೇಂದ್ರ ಮೋದಿ</p></div>

ಖಲೀದಾ ಜಿಯಾ ಮತ್ತು ಪ್ರಧಾನಿ ನರೇಂದ್ರ ಮೋದಿ

   

ಚಿತ್ರ: narendramodi

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ನಿಧನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ.

ADVERTISEMENT

ಬಾಂಗ್ಲಾ ಅಭಿವೃದ್ಧಿ ಹಾಗೂ ಭಾರತ-ಬಾಂಗ್ಲಾದೇಶ ಸಂಬಂಧಗಳಿಗೆ ಅವರು ನೀಡಿದ ಕೊಡುಗೆಗಳು ಸದಾ ಸ್ಮರಣೀಯ ಎಂದಿದ್ದಾರೆ. 

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ‘ಮಾಜಿ ಪ್ರಧಾನಿ ಮತ್ತು ಬಿಎನ್‌ಪಿ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಅವರ ಕುಟುಂಬ ಮತ್ತು ಬಾಂಗ್ಲಾದೇಶದ ಎಲ್ಲಾ ಜನರಿಗೆ ಭಗವಂತ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. 2015 ರಲ್ಲಿ ಢಾಕಾದಲ್ಲಿ ಅವರೊಂದಿಗಿನ ನನ್ನ ಆತ್ಮೀಯ ಭೇಟಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅವರ ದೂರದೃಷ್ಟಿ ಮತ್ತು ಪರಂಪರೆ ಉಭಯ ದೇಶಗಳಿಗೆ ಮಾರ್ಗದರ್ಶನವಾಗಿದೆ ಎಂದು ನಾವು ಭಾವಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದಿದ್ದಾರೆ. 

ಅಮೆರಿಕ ಸಂತಾಪ

ಖಲೀದಾ ಜಿಯಾ ನಿಧನಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕ ಸಂತಾಪ ಸೂಚಿಸಿದೆ. ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಬಾಂಗ್ಲಾದಲ್ಲಿರುವ ಅಮೆರಿಕ ರಾಯಭಾರ ಕಚೇರಿ ‘ಜಿಯಾ ತಮ್ಮ ದೇಶದ ಆಧುನಿಕ ಇತಿಹಾಸವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಅವರ ನಾಯಕತ್ವವು ಬಾಂಗ್ಲಾದೇಶದ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ’ ಎಂದು ಬರೆದುಕೊಂಡಿದೆ.

ಪಾಕಿಸ್ತಾನ ಪ್ರಧಾನಿ ಸಂತಾಪ

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಪ್‌, ‘ಬೇಗಂ ಖಲೀದಾ ಜಿಯಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಬೇಗಂ ಜಿಯಾ ಪಾಕಿಸ್ತಾನದ ಉತ್ತಮ ಸ್ನೇಹಿತೆಯಾಗಿದ್ದರು. ಈ ದುಃಖದ ಕ್ಷಣದಲ್ಲಿ ನನ್ನ ಸರ್ಕಾರ ಮತ್ತು ಪಾಕಿಸ್ತಾನದ ಜನರು ಬಾಂಗ್ಲಾದೇಶದ ಜನರೊಂದಿಗೆ ನಿಲ್ಲುತ್ತೇವೆ. ಅಲ್ಲಾಹನು ಅವರ ಆತ್ಮಕ್ಕೆ ಶಾಂತಿ ನೀಡಲಿ’ ಎಂದು ಬರೆದುಕೊಂಡಿದ್ದಾರೆ. 

ಸಂತಾಪ ಸೂಚಿಸಿದ ಜರ್ಮನಿ

ಖಲೀದಾ ಜಿಯಾ ನಿಧನಕ್ಕೆ ಜರ್ಮನಿ ಸಂತಾಪ ಸೂಚಿಸಿದ್ದು, ‘ನಮ್ಮ ಎರಡೂ ದೇಶಗಳ ನಡುವಿನ ಶಾಶ್ವತ ಸ್ನೇಹಕ್ಕೆ ಜರ್ಮನಿ ಬದ್ಧವಾಗಿದೆ’ ಎಂದಿದೆ.

ಬಾಂಗ್ಲಾದೇಶದಲ್ಲಿ ಏಳು ದಿನ ಶೋಕಾಚರಣೆ

ಪಕ್ಷದ ಅಧ್ಯಕ್ಷೆ ಖಲೀದಾ ನಿಧನದ ಹಿನ್ನೆಲೆ ಬಾಂಗ್ಲಾದೇಶ ನ್ಯಾಷನಲ್ ಪಕ್ಷ (ಬಿಎನ್‌ಪಿ) ಮಂಗಳವಾರ ಏಳು ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ.

‘ನಯಪಾಲ್ಟನ್‌ನಲ್ಲಿರುವ ಬಿಎನ್‌ಪಿಯ ಕೇಂದ್ರ ಕಚೇರಿ ಮತ್ತು ರಾಷ್ಟ್ರವ್ಯಾಪಿ ಪಕ್ಷದ ಕಚೇರಿಗಳಲ್ಲಿ ಕಪ್ಪು ಬಾವುಟಗಳನ್ನು ಹಾರಿಸಲಾಗುವುದು. ಖಲೀದಾ ಅವರ ಸ್ಮರಣಾರ್ಥ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಬೆಂಬಲಿಗರು ಕಪ್ಪು ಬ್ಯಾಡ್ಜ್‌ಗಳನ್ನು ಧರಿಸಿ ಗೌರವ ಸಲ್ಲಿಸಲಿದ್ದಾರೆ. ಬಾಂಗ್ಲಾದೇಶದಾದ್ಯಂತ ಪಾರ್ಟಿ ಸ್ಥಳಗಳು ಮತ್ತು ಇತರ ಸ್ಥಳಗಳಲ್ಲಿ ದೋವಾ ಮಹ್ಫಿಲ್‌ಗಳು (ಪ್ರಾರ್ಥನಾ ಕೂಟಗಳು) ಮತ್ತು ಕುರಾನ್ ಪಠಣಗಳು ನಡೆಯಲಿವೆ’ ಎಂದು ಪಕ್ಷ ತಿಳಿಸಿರುವುದಾಗಿ ವರದಿಯಾಗಿದೆ. 

ದೀರ್ಘಕಾಲದ ಅನಾರೋಗ್ಯದಿಂದ ಖಲೀದಾ ಜಿಯಾ ಅವರು ಮಂಗಳವಾರ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.