ADVERTISEMENT

75ನೇ ಜನ್ಮದಿನ | ಶುಭಾಶಯಗಳ ಮಹಾಪೂರ; ಮೋದಿ ನಾಯಕತ್ವ ಶ್ಲಾಘಿಸಿದ ವಿಶ್ವ ಮುಖಂಡರು

ಪಿಟಿಐ
Published 17 ಸೆಪ್ಟೆಂಬರ್ 2025, 15:46 IST
Last Updated 17 ಸೆಪ್ಟೆಂಬರ್ 2025, 15:46 IST
   

ಮಾಸ್ಕೊ/ಲಂಡನ್‌: ತಮ್ಮ 75ನೇ ಜನ್ಮದಿನ ಆಚರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವ ನಾಯಕರು, ಸೆಲೆಬ್ರಿಟಿಗಳು, ಚಿತ್ರನಟರು, ಉದ್ಯಮಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬಂದಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಇಸ್ರೇಲ್‌ ಪ್ರಧಾನಿ  ಬೆಂಜಮಿನ್‌ ನೆತನ್ಯಾಹು, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ, ನ್ಯೂಜಿಲೆಂಡ್‌ ಪ್ರಧಾನಿ ಕ್ರಿಸ್ಟೋಫರ್‌ ಲಕ್ಸನ್‌, ಭೂತಾನ್‌ ಪ್ರಧಾನಿ ಶೆರಿಂಗ್ ತೊಬ್ಗೆ, ಮ್ಯಾನ್ಮಾರ್‌ ಅಧ್ಯಕ್ಷ, ಥಾಯ್ಲೆಂಡ್‌ ಪ್ರಧಾನಿ, ಗಯಾನದ ಅಧ್ಯಕ್ಷ ಸೇರಿ ಹಲವು ಮುಖಂಡರು ಪ್ರಧಾನಿ ಮೋದಿ ಅವರಿಗೆ ಜನ್ಮದಿನದ ಶುಭಾಶಯ ಕೋರಿ, ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. 

‘ದೊಡ್ಡ ಮಟ್ಟದ ವೈಯಕ್ತಿಕ ಕೊಡುಗೆ ಮೂಲಕ  ದ್ವಿಪಕ್ಷೀಯ ಸಂಬಂಧವನ್ನು ನೀವು ಬಲಪಡಿಸಿದ್ದೀರಿ. ಆ ಮೂಲಕ ವಿಶ್ವ ವೇದಿಕೆಯಲ್ಲಿ ಅಗಾಧ ಗೌರವ, ಅಧಿಕಾರವನ್ನು ನೀವು ಗಳಿಸಿದ್ದೀರಿ’ ಎಂಬ ರಷ್ಯಾ ಅಧ್ಯಕ್ಷರ ಶುಭಾಶಯ ನುಡಿಯನ್ನು ಅಲ್ಲಿನ ಆಡಳಿತ ಕಚೇರಿ ಕ್ರೆಮ್ಲಿನ್ ತನ್ನ  ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. 

ADVERTISEMENT

ಟ್ರಂಪ್‌ ಶುಭಾಶಯ ಕೋರಿರುವ ಬೆನ್ನಲ್ಲೇ, ಅಮೆರಿಕದ ಶೇ 50ರಷ್ಟು ಸುಂಕದಿಂದ ಉಭಯ ದೇಶಗಳ ನಡುವೆ ಹಳಸಿದ್ದ ದ್ವಿಪಕ್ಷೀಯ ಸಂಬಂಧಗಳಲ್ಲಿ ಮತ್ತೆ ಸುಧಾರಣೆ ಕಾಣುವ ಭರವಸೆ ಮೂಡಿದೆ. 

ಮೋದಿ ನಮಗೆ ‘ಒಳ್ಳೆಯ ಸ್ನೇಹಿತ’. ನೀವು ನಿಮ್ಮ ಜೀವನದ ಮೂಲಕ ಭಾರತಕ್ಕಾಗಿ ಸಾಕಷ್ಟು ಸಾಧಿಸಿದ್ದೀರಿ. ಭಾರತ–ಇಸ್ರೇಲ್‌ ಪಾಲುದಾರಿಕೆ ಮತ್ತಷ್ಟು ಎತ್ತರಕ್ಕೇರಲಿ
ಇಸ್ರೇಲ್‌ ಪ್ರಧಾನಿ  ಬೆಂಜಮಿನ್‌ ನೆತನ್ಯಾಹು
‘ನಿಮ್ಮ ಬದ್ಧತೆ, ಸಮರ್ಪಣಾ ಮನೋಭಾ, ಸಾಮರ್ಥ್ಯವು ಲಕ್ಷಾಂತರ ಜನರನ್ನು ಸ್ಫೂರ್ತಿಯಿಂದ ಮುನ್ನಡೆಸುತ್ತಿದೆ
ಜಾರ್ಜಿಯಾ ಮೆಲೊನಿ, ಇಟಲಿ ಪ್ರಧಾನಿ
‘ಪ್ರಧಾನಿ ಮೋದಿ ಅವರಿಗೆ ಜನ್ಮದಿನದ ಶುಭಾಶಯ ಕೋರುವುದು ಅತೀವ ಸಂತೋಷದ ವಿಷಯ. ಈಗಿನ ಅಸ್ಥಿರತೆಯ ಸಮಯದಲ್ಲಿ ಮೋದಿ ಅವರಂಥ ಉತ್ತಮ ಸ್ನೇಹಿತರು ಎಲ್ಲರಿಗೂ ಬೇಕು
ರಿಷಿ ಸುನಕ್‌, ಬ್ರಿಟನ್‌ ಮಾಜಿ ಪ್ರಧಾನಿ 
ಭಾರತ– ಆಸ್ಟ್ರೇಲಿಯಾ ನಡುವಿನ ಗಾಢವಾದ ಸಂಬಂಧವನ್ನೂ, ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯದ ಕೊಡುಗೆಯನ್ನು ನಾವು ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸ್ಮರಿಸುತ್ತೇವೆ
ಆಂಥೊನಿ ಅಲ್ಬನೀಸ್, ಆಸ್ಟ್ರೇಲಿಯಾ ಪ್ರಧಾನಿ 
ಮೋದಿ ಅವರ ನಾಯಕತ್ವದಲ್ಲಿ ಭಾರತದ ಅಂತರರಾಷ್ಟ್ರೀಯ ಖ್ಯಾತಿ ಹೆಚ್ಚಿದೆ.  ಸವಾಲಿನ ಸಂದರ್ಭದಲ್ಲಿ ಅವರು ಶ್ರೀಲಂಕಾವನ್ನು ಬೆಂಬಲಿಸಿದ್ದಾರೆ
ಅನುರಾ ಕುಮಾರ ದಿಸ್ಸನಾಯಕೆ  ಶ್ರೀಲಂಕಾ ಅಧ್ಯಕ್ಷ 
ವಿಕಸಿತ ಭಾರತ ಮತ್ತು ವಿಶ್ವದ ಪ್ರಗತಿಗೆ ಮೋದಿ ಅವರ ಕೊಡುಗೆ ಮಹತ್ವದ್ದು. ಭಾರತದೊಂದಿಗಿನ ನಮ್ಮ ಪಾಲುದಾರಿಕೆಯನ್ನು ನಾವು ಗೌರವಿಸುತ್ತೇವೆ
ಬಿಲ್ ಗೇಟ್ಸ್  ಮೈಕ್ರೊಸಾಫ್ಟ್‌ನ ಸಹ ಸ್ಥಾಪಕ

‘ಸೇವಾ ಪಾಕ್ಷಿಕ’ ಆಚರಣೆ

ಮೋದಿ ಅವರ 75ನೇ ಜನ್ಮದಿನದ ಹಿನ್ನೆಲೆಯಲ್ಲಿ ಬಿಜೆಪಿಯು ದೇಶದಾದ್ಯಂತ  ‘ಸೇವಾ ಪಾಕ್ಷಿಕ’ ಆಚರಿಸಲಿದೆ.   ಸ್ವಚ್ಛತಾ ಅಭಿಯಾನ ಆರೋಗ್ಯ ಶಿಬಿರಗಳ ಆಯೋಜನೆ ಸ್ವದೇಶಿ ಉತ್ಪನ್ನಗಳ ಬಳಕೆಗೆ ಪ್ರೋತ್ಸಾಹ ಸೇರಿ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಒಳಗೊಂಡಿರುವ ‘ಸೇವಾ ಪಾಕ್ಷಿಕ’ವು ಅಕ್ಟೋಬರ್‌ 2ರಂದು ಗಾಂಧಿ ಜಯಂತಿ ದಿನ ಸಮಾರೋಪಗೊಳ್ಳಲಿದೆ. ‘ಇದು ನವ ಭಾರತ. ನಾವು ಯಾವುದೇ ಅಣ್ವಸ್ತ್ರ ಬೆದರಿಕೆಗೆ ಹೆದರುವುದಿಲ್ಲ. ಶತ್ರುವಿನ ಮನೆಗೆ ನುಗ್ಗಿ ಸೆದೆಬಡಿಯುತ್ತೇವೆ’ ಎಂದು ಪ್ರಧಾನಿ ತಮ್ಮ ಜನ್ಮದಿನದ ಅಂಗವಾಗಿ  ಮಧ್ಯಪ್ರದೇಶದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಂಗಳವಾರ ಹೇಳಿದ್ದರು. 

ಮೋದಿ ಅವರ ದೂರದೃಷ್ಟಿಯ ನಾಯಕತ್ವವು ವಿಶ್ವ ಮಟ್ಟದಲ್ಲಿ ಭಾರತದ ಸಾಮರ್ಥ್ಯ ಹೆಚ್ಚಿಸಿದೆ. ಅವರು ನವ ಭಾರತದ ದಿಕ್ಸೂಚಿಯಾಗಿದ್ದಾರೆ
ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ   
ಮೋದಿ ಅವರು ಜನ ಕಲ್ಯಾಣಕ್ಕಾಗಿ 5 ದಶಕಗಳಿಂದ  ಶ್ರಮಿಸುತ್ತಿದ್ದಾರೆ. ‘ದೇಶ ಮೊದಲು’ ಎನ್ನುವ ಅವರ  ಧ್ಯೇಯವಾಕ್ಯ ಭಾರತೀಯರಿಗೆ ಸ್ಫೂರ್ತಿ
ಅಮಿತ್‌ ಶಾ, ಕೇಂದ್ರ ಗೃಹ ಸಚಿವ 

ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮಗಳು

  • ಮಧ್ಯಪ್ರದೇಶದ ಧಾರ್‌ ಜಿಲ್ಲೆಯಲ್ಲಿ ಜವಳಿ ಮತ್ತು ಸಿದ್ಧ ಉಡುಪುಗಳ ಬೃಹತ್‌ ಪಾರ್ಕ್‌ಗೆ (ಪಿಎಂ–ಎಂಐಟಿಆರ್‌ಎ) ಶಂಕುಸ್ಥಾಪನೆ  

  • ಸ್ವಸ್ಥ ನಾರಿ ಸಶಕ್ತ ಪರಿವಾರ ಯೋಜನೆ  8ನೇ ರಾಷ್ಟ್ರೀಯ ಫೋಷಣ್‌ ಮಾಸಿಕ ಅಭಿಯಾನಕ್ಕೆ ಚಾಲನೆ  * ನಗರ ಹಸಿರೀಕರಣಕ್ಕೆ  ಸಸಿ ನೆಡುವ ’ನಮೋ ವ್ಯಾನ್‌‘ ಉದ್ಘಾಟನೆ 

  • ದೆಹಲಿಯಲ್ಲಿ 101 ಆಯುಷ್ಮಾನ್‌ ಆರೋಗ್ಯ ಮಂದಿರ ಕ್ಲಿನಿಕ್‌ ಉದ್ಘಾಟನೆ 

  • ಅಟಲ್‌ ಆಶಾ ನರ್ಸಿಂಗ್‌ ಹೋಂ ಮತ್ತು ವಸತಿ ನಿಲಯ ಉದ್ಘಾಟನೆ  ’ಮೋದಿ ಅವರ ಬಾಲ್ಯ ಆಧರಿಸಿದ ಸಾಕ್ಷ್ಯಚಿತ್ರ ’ಚಲೋ ಜೀತಾ ಹೈ’ ಪ್ರದರ್ಶನ 

  • ನಮೊ ಆ್ಯಪ್‌ ಮೂಲಕ ಡಿಜಿಟಲ್‌ ಸ್ವಯಂ ಸೇವಾ ಅಭಿಯಾನ ‘ಸೇವಾ ಪರ್ವ’ಕ್ಕೆ ಚಾಲನೆ 

  • ಉತ್ತರಾಖಾಂಡದ ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತೋತ್ಸವ–2025 ವಿಶೇಷ ಅಭಿಯಾನ

  • ದೇಶದ ವಿವಿಧೆಡೆ ರಕ್ತದಾನ ಆರೋಗ್ಯ ಶಿಬಿರ ಆಯೋಜನೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.