ನರೇಂದ್ರ ಮೋದಿ
(ಪಿಟಿಐ ಚಿತ್ರ)
ಕುವೈತ್ ಸಿಟಿ: ಎರಡು ದಿನಗಳ ಯಶಸ್ವಿ ಕುವೈತ್ ಪ್ರವಾಸದ ಬಳಿಕ ತಾಯ್ನಾಡಿನತ್ತ ಪ್ರಯಾಣ ಬೆಳೆಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಇದೊಂದು ಐತಿಹಾಸಿಕ ಭೇಟಿ ಎಂದು ಬಣ್ಣಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ವಿಡಿಯೊ ಹಂಚಿಕೊಂಡಿರುವ ಪ್ರಧಾನಿ ಮೋದಿ, 'ಧನ್ಯವಾದಗಳು ಕುವೈತ್! ಈ ಭೇಟಿಯು ಐತಿಹಾಸಿಕವಾಗಿದ್ದು, ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ವೃದ್ಧಿಸಲಿದೆ' ಎಂದು ಹೇಳಿದ್ದಾರೆ.
'ಕುವೈತ್ ಸರ್ಕಾರ ಮತ್ತು ಜನರ ಪ್ರೀತಿಗಾಗಿ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ತಮ್ಮನ್ನು ಬೀಳ್ಕೊಡಲು ವಿಮಾನ ನಿಲ್ದಾಣದವರೆಗೂ ಬಂದ ಕುವೈತ್ ಪ್ರಧಾನಿಗೆ ವಿಶೇಷವಾದ ಧನ್ಯವಾದಗಳು' ಎಂದು ಹೇಳಿದ್ದಾರೆ.
ಈ ಮೊದಲು ಕುವೈತ್‌ನ ರಾಜ ಶೇಕ್ ಮಿಶಾಲ್ ಅಲ್ ಅಹಮದ್ ಅಲ್ ಜಾಬೆರ್ ಅಲ್ ಸಬಾ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುವೈತ್‌ನ ಅತ್ಯುನ್ನತ ಗೌರವ 'ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್' ನೀಡಿ ಗೌರವಿಸಿದ್ದರು.
43 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಕುವೈತ್‌ಗೆ ಭೇಟಿ ನೀಡಿದ್ದಾರೆ. 1981ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಇಲ್ಲಿಗೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.