
ಕ್ವಾಲಾಲಂಪುರ: ‘ಭಾರತವು ಪ್ರಗತಿಯ ವಿಶ್ವಾಸಾರ್ಹ ಪಾಲುದಾರ’ ಎಂಬುದಾಗಿ ಜಗತ್ತು ನೋಡುತ್ತಿದೆ. ಐರೋಪ್ಯ ಒಕ್ಕೂಟವಲ್ಲದೇ ಹಲವು ದೇಶಗಳೊಂದಿಗೆ ಇತ್ತೀಚೆಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದಗಳೇ ಇದಕ್ಕೆ ಸಾಕ್ಷಿ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
ಎರಡು ದಿನಗಳ ಮಲೇಷ್ಯಾ ಪ್ರವಾಸ ಕೈಗೊಂಡಿರುವ ಅವರು, ಇಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು.
ಬ್ರಿಟನ್, ಅಮೆರಿಕ, ಯುನೈಟೆಡ್ ಅರಬ್ ಎಮಿರೇಟ್ಸ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಒಮಾನ್ ಹಾಗೂ ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದಗಳನ್ನು ಉಲ್ಲೇಖಿಸಿದ ಮೋದಿ,‘ನಂಬಿಕೆಯು ಭಾರತದ ಬಲಿಷ್ಠ ಕರೆನ್ಸಿಯಾಗಿದೆ’ ಎಂದರು.
ಸ್ವಾಗತ: ಇದಕ್ಕೂ ಮುನ್ನ, ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಪ್ರಧಾನಿ ಅನ್ವರ್ ಇಬ್ರಾಹಿಂ ಸ್ವಾಗತಿಸಿದರು. ಬಳಿಕ, ಇಬ್ಬರೂ ಒಂದೇ ಕಾರಿನಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ತೆರಳಿದರು. ಅಲ್ಲಿ ಇಬ್ಬರಿಗೂ ಅಭೂತಪೂರ್ವ ಸ್ವಾಗತ ದೊರೆಯಿತು. ‘ಭಾರತ್ ಮಾತಾ ಕಿ ಜೈ’, ‘ಮೋದಿ, ಮೋದಿ’ ಎಂಬ ಘೋಷಣೆಗಳ ನಡುವೆ ವೇದಿಕೆಗೆ ಬಂದರು.
800ಕ್ಕೂ ಹೆಚ್ಚು ಕಲಾವಿದರು ಭರತನಾಟ್ಯ, ಕಥಕ್, ಕಥಕ್ಕಳಿ, ಕೂಚಿಪುಡಿ, ಯಕ್ಷಗಾನ, ಲಾವಣಿ ಮತ್ತು ಒಡಿಸಿ ಸೇರಿದಂತೆ ಭಾರತೀಯ ಶಾಸ್ತ್ರೀಯ ಮತ್ತು ಜನಪದ ನೃತ್ಯಗಳನ್ನು ಪ್ರದರ್ಶಿಸಿದರು.
ಇದೇ ವೇಳೆ, ಭಾರತೀಯ ನೃತ್ಯ ಪ್ರದರ್ಶನವೊಂದರಲ್ಲಿ ಅತಿ ಹೆಚ್ಚು ಕಲಾವಿದರು ಭಾಗವಹಿಸಿದ್ದಕ್ಕಾಗಿ, ಆ ಪ್ರದರ್ಶನವು ‘ಮಲೇಷಿಯನ್ ಬುಕ್ ಆಫ್ ರೆಕಾರ್ಡ್ಸ್’ ಸೇರಿದೆ ಎಂದು ಘೋಷಿಸಲಾಯಿತು.
ರಾಜತಾಂತ್ರಿಕ ಸಂಬಂಧ ವ್ಯಾಪಾರ ಒಪ್ಪಂದಗಳಿಗೂ ಮೊದಲೇ ಭಾರತ ಮತ್ತು ಮಲೇಷ್ಯಾ ನಡುವೆ ಪ್ರಾಚೀನ ಕಾಲದಿಂದಲೂ ಉತ್ತಮ ಬಾಂಧವ್ಯ ಇದೆಅನ್ವರ್ ಇಬ್ರಾಹಿಂ ಮಲೇಷ್ಯಾ ಪ್ರಧಾನಿ
ದೊಡ್ಡ ಸಂಖ್ಯೆಯಲ್ಲಿ ನೆಲಸಿರುವ ಭಾರತೀಯರು ಮಲೇಷ್ಯಾ–ಭಾರತ ನಡುವಿನ ಬಾಂಧವ್ಯಕ್ಕೆ ಸೇತುವೆಯಾಗಿದ್ದಾರೆ. ಭಾಷೆ ಪರಂಪರೆ ಸೇರಿ ಹಲವು ವಿಚಾರಗಳು ಉಭಯ ದೇಶಗಳನ್ನು ಬೆಸೆದಿವೆನರೇಂದ್ರ ಮೋದಿ ಪ್ರಧಾನಿ
ಪ್ರಮುಖ ಘೋಷಣೆಗಳು
* ಮಲೇಷ್ಯಾದಲ್ಲಿ ಹೊಸ ಕಾನ್ಸುಲೇಟ್ ಕಚೇರಿ ಸ್ಥಾಪನೆ * ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ತಿರುವಳ್ಳುವರ್ ಕೇಂದ್ರ ಸ್ಥಾಪನೆ
* ಭಾರತದಲ್ಲಿ ವ್ಯಾಸಂಗ ಕೈಗೊಳ್ಳುವ ಮಲೇಷ್ಯಾ ವಿದ್ಯಾರ್ಥಿಗಳಿಗಾಗಿ ‘ತಿರುವಳ್ಳುವರ್ ವಿದ್ಯಾರ್ಥಿವೇತನ’ ಆರಂಭ
* ಭಾರತದ ಯುಪಿಐ ಮೂಲಕ ಹಣ ಪಾವತಿ ಸೌಲಭ್ಯ ಮಲೇಷ್ಯಾದಲ್ಲಿ ಶೀಘ್ರದಲ್ಲೇ ಜಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.