ADVERTISEMENT

2070ರ ವೇಳೆಗೆ ಭಾರತ ‘ಇಂಗಾಲ ಹೊರಸೂಸುವಿಕೆ’ ಮುಕ್ತ: ಪ್ರಧಾನಿ ಮೋದಿ ಘೋಷಣೆ

ಗ್ಲಾಸ್ಗೋ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಘೋಷಣೆ

ಪಿಟಿಐ
Published 2 ನವೆಂಬರ್ 2021, 6:43 IST
Last Updated 2 ನವೆಂಬರ್ 2021, 6:43 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಗ್ಲಾಸ್ಗೋ: ‘2070ರ ವೇಳೆಗೆ ಭಾರತವನ್ನು ಇಂಗಾಲ ಹೊರಸೂಸುವಿಕೆಯಿಂದ ಮುಕ್ತಗೊಳಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ಇಲ್ಲಿ ನಡೆಯುತ್ತಿರುವ ‘ಸಿಒಪಿ26 ಹವಾಮಾನ ಶೃಂಗಸಭೆ‘ಯಲ್ಲಿ ಮಾತನಾಡಿದ ಅವರು, ‘ಹವಾಮಾನ ಬದಲಾವಣೆ ತಡೆಗೆ ಸಂಬಂಧಿಸಿ ಪ್ಯಾರಿಸ್‌ ಒಪ್ಪಂದಲ್ಲಿ ಉಲ್ಲೇಖಿಸಿರುವ ಸೂತ್ರಗಳನ್ನು ಅಕ್ಷರಶಃ ಕಾರ್ಯರೂಪಕ್ಕೆ ತರುತ್ತಿರುವ ಏಕೈಕ ದೇಶವೆಂದರೆ ಭಾರತ’ ಎಂದು ಪ್ರತಿಪಾದಿಸಿದರು.

‘ಹವಾಮಾನ ಬದಲಾವಣೆಯಿಂದ ಪರಿಸರದ ಮೇಲೆ ಆಗುತ್ತಿರುವ ಪರಿಣಾಮಗಳ ವಿರುದ್ಧ ಭಾರತ ದೃಢವಾದ ಹೋರಾಟ ಕೈಗೊಂಡಿದೆ. ಈ ಹೋರಾಟದ ಫಲಿತಾಂಶವನ್ನು ಜಗತ್ತಿಗೆ ಭಾರತ ತೋರಿಸುವುದು’ ಎಂದೂ ಹೇಳಿದರು.

ADVERTISEMENT

‘ಭಾರತ ರೂಪಿಸುವ ಪ್ರತಿ ನೀತಿಯು ಕೂಡ ಹವಾಮಾನ ಬದಲಾವಣೆ ವಿಷಯ ಕೇಂದ್ರಿತವಾಗಿರುತ್ತದೆ. ಮುಂದಿನ ಪೀಳಿಗೆಗೆ ಸಹ ಈ ವಿದ್ಯಮಾನದ ಬಗ್ಗೆ ಅರಿವು ಇರಬೇಕಾದದ್ದು ಅಗತ್ಯ. ಹೀಗಾಗಿ ಶಾಲಾ ಪಠ್ಯಕ್ರಮದಲ್ಲಿ ಹವಾಮಾನ ಬದಲಾವಣೆ ವಿಷಯವನ್ನು ಅಳವಡಿಸಬೇಕು’ ಎಂದು ಪ್ರತಿಪಾದಿಸಿದರು.

‘ಹವಾಮಾನ ಬದಲಾವಣೆ ತಡೆಗೆ ರೂಪಿಸಿದ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 1 ಟ್ರಿಲಿಯನ್ ಡಾಲರ್ ಹಣಕಾಸು ನೆರವು ಒದಗಿಸುವುದಾಗಿ ಅಭಿವೃದ್ಧಿ ಹೊಂದಿದ ದೇಶಗಳು ಭರವಸೆ ನೀಡಿವೆ. ಈ ದೇಶಗಳು ತಾವು ನೀಡಿರುವ ಈ ಭರವಸೆಯನ್ನು ಈಡೇರಿಸಬೇಕು. ಹವಾಮಾನ ಬದಲಾವಣೆ ತಡೆಯಲು ರೂಪಿಸಿರುವ ಕ್ರಮಗಳ ಅನುಷ್ಠಾನದ ಮೇಲೆ ನಿಗಾ ಇರಿಸುವ ರೀತಿಯಲ್ಲಿಯೇ ಈ ಹಣಕಾಸು ನೆರವು ಭರವಸೆಯನ್ನು ಈಡೇರಿಸುವುದರ ಮೇಲೆಯೂ ನಿಗಾ ಇಡಬೇಕು’ ಎಂದರು.

‘ಭಾರತದಿಂದ ಐದು ಸೂತ್ರಗಳ ಪಾಲನೆ’

ಹವಾಮಾನ ಬದಲಾವಣೆ ತಡೆಗೆ ಭಾರತ ಐದು ಪ್ರಮುಖ ಸೂತ್ರಗಳನ್ನು ಅನುಷ್ಠಾನಗೊಳಿಸಲು ಶ್ರಮಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.

ಸೂತ್ರಗಳು ಹೀಗಿವೆ:

* ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ವಿದ್ಯುತ್‌ ಉತ್ಪಾದನೆ ಹೆಚ್ಚಿಸುವುದು. 2030ರ ವೇಳೆಗೆ 500 ಗಿಗಾವಾಟ್‌ ವಿದ್ಯುತ್‌ ಉತ್ಪಾದನೆ ಗುರಿ

* ದೇಶದ ಒಟ್ಟು ವಿದ್ಯುತ್‌ ಬೇಡಿಕೆಯಲ್ಲಿ ಶೇ 50ರಷ್ಟು ವಿದ್ಯುತ್‌ಅನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸುವುದು

* 2030ರ ವೇಳೆಗೆ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಶತಕೋಟಿ ಟನ್‌ಗಳಷ್ಟು ಕಡಿಮೆಗೊಳಿಸುವುದು

* ಆರ್ಥಿಕ ಚಟುವಟಿಕೆಗಳ ಕಾರಣದಿಂದಾಗಿ ಪರಿಸರ ಸೇರುವ ಇಂಗಾಲದ ಪ್ರಮಾಣವನ್ನು ಶೇ 45ರಷ್ಟು ಕಡಿಮೆ ಮಾಡುವುದು

* 2070ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿ ಸಾಧನೆ

ಪ್ರಧಾನಿ ಘೋಷಣೆ: ಯಾದವ್ ಸ್ವಾಗತ

ಗ್ಲಾಸ್ಗೋ/ನವದೆಹಲಿ: ‘2070ರ ವೇಳೆಗೆ ಭಾರತವು ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿಯನ್ನು ಸಾಧಿಸುವುದು’ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಗ್ಲಾಸ್ಗೋ ಶೃಂಗಸಭೆಯಲ್ಲಿ ಘೋಷಿಸಿರುವುದನ್ನು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ಸ್ವಾಗತಿಸಿದ್ದಾರೆ.

‘ಹವಾಮಾನ ಬದಲಾವಣೆ ತಡೆಗೆ ಸಂಬಂಧಿಸಿದ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂಬ ಸಂದೇಶವನ್ನು ಪ್ರಧಾನಿ ಮೋದಿ ಅವರು ಜಗತ್ತಿಗೆ ಮತ್ತೊಮ್ಮೆ ರವಾನಿಸಿದ್ಧಾರೆ’ ಎಂದು ಅವರು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

‘ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಭಾರತದ ಪಾಲು ಶೇ 17ರಷ್ಟಿದ್ದರೂ, ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ತ್ಯಾಜ್ಯಗಳನ್ನು ಹೊರಸೂಸುವಿಕೆಗೆ ಸಂಬಂಧಿಸಿ ಭಾರತದ ಪ್ರಮಾಣ ಶೇ 5ರಷ್ಟು ಮಾತ್ರ ಇದೆ. ಪರಿಸರ ಮಾಲಿನ್ಯ ತಡೆಗೆ ಲಭಿಸುವ ಯಾವುದೇ ಅವಕಾಶವನ್ನು ಭಾರತ ಕಳೆದುಕೊಂಡಿಲ್ಲ ಎಂಬುದನ್ನು ಇದು ತೋರಿಸುತ್ತದೆ’ ಎಂದೂ ಸಚಿವ ಯಾದವ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.