ADVERTISEMENT

ಇದು ಯುದ್ಧದ ಸಮಯವಲ್ಲ: ಮೋದಿ ಹೇಳಿದ್ದು ಸರಿ ಇದೆ– ಫ್ರಾನ್ಸ್ ಅಧ್ಯಕ್ಷ ಮಾಕ್ರನ್

ಪಿಟಿಐ
Published 21 ಸೆಪ್ಟೆಂಬರ್ 2022, 2:10 IST
Last Updated 21 ಸೆಪ್ಟೆಂಬರ್ 2022, 2:10 IST
ಎಮ್ಯಾನುಯೆಲ್ ಮ್ಯಾಕ್ರನ್
ಎಮ್ಯಾನುಯೆಲ್ ಮ್ಯಾಕ್ರನ್    

ವಿಶ್ವಸಂಸ್ಥೆ: ಇದು ಯುದ್ಧದ ಸಮಯವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಹೇಳಿದ್ದು ಸರಿ ಇದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.

ಕಳೆದ ವಾರ ಉಜ್ಬೇಕಿಸ್ತಾನದ ಸಮರ್ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಸಭೆಯ ಸಮಯದಲ್ಲಿ ಪುಟಿನ್ ಅವರನ್ನು ಭೇಟಿಯಾಗಿದ್ದ ಮೋದಿ, ‘ಈ ಯುಗ ಯುದ್ಧದ ಯುಗವಲ್ಲ’ ಎಂದು ರಷ್ಯಾ ನಾಯಕರಿಗೆ ಹೇಳಿದ್ದರು. ಈ ವಿಷಯದ ಬಗ್ಗೆ ಹಲವಾರು ಬಾರಿ ಪುಟಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ಮೋದಿ, ಪ್ರಜಾಪ್ರಭುತ್ವ, ರಾಜತಾಂತ್ರಿಕತೆ ಮತ್ತು ಮಾತುಕತೆಯ ಮಹತ್ವವನ್ನು ಒತ್ತಿ ಹೇಳಿದ್ದರು.

‘ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದು ಸರಿ, ಇದು ಯುದ್ಧದ ಸಮಯವಲ್ಲ. ಪಾಶ್ಚಿಮಾತ್ಯರ ವಿರುದ್ಧ ಪೂರ್ವದ ಅಥವಾ ಪೂರ್ವದ ವಿರುದ್ಧ ಪಾಶ್ಚಿಮಾತ್ಯರು ಸೇಡು ತೀರಿಸಿಕೊಳ್ಳುವ ಸಮಯವೂ ಅಲ್ಲ. ಎಲ್ಲರೂ ಒಂದಾಗಿ ಸವಾಲುಗಳನ್ನು ಎದುರಿಸುವ ಸಮಯ’ಎಂದು ಮ್ಯಾಕ್ರನ್ ಮಂಗಳವಾರ ವಿಶ್ವಸಂಸ್ಥೆಯಲ್ಲಿ ಮ್ಯಾಕ್ರನ್ ಹೇಳಿದರು.

ADVERTISEMENT

‘ಇದಕ್ಕಾಗಿಯೇ ಉತ್ತರ ಮತ್ತು ದಕ್ಷಿಣದ ನಡುವೆ ಹೊಸ ಒಪ್ಪಂದವನ್ನು ಅಭಿವೃದ್ಧಿಪಡಿಸುವ ತುರ್ತು ಅವಶ್ಯಕತೆಯಿದೆ. ಆಹಾರ, ಜೀವವೈವಿಧ್ಯ, ಶಿಕ್ಷಣಕ್ಕಾಗಿ ಗೌರವಾನ್ವಿತವಾದ ಪರಿಣಾಮಕಾರಿ ಒಪ್ಪಂದದ ಅಗತ್ಯವಿದೆ. ನಿರ್ದಿಷ್ಟ ಕ್ರಿಯೆಗಳ ಒಕ್ಕೂಟವನ್ನು ನಿರ್ಮಿಸಲು ಸಮಯವಾಗಿದೆ’ಎಂದು ಅವರು ಹೇಳಿದರು.

ಮೋದಿ ಮಾತಿಗೆ ಪ್ರತಿಕ್ರಿಯಿಸಿದ್ದ ಪುಟಿನ್, ನೀವು ನಿರಂತರವಾಗಿ ಯುದ್ಧ ಪರಿಸ್ಥಿತಿಯ ಬಗ್ಗೆ ವ್ಯಕ್ತಪಡಿಸುತ್ತಿರುವ ಕಳವಳ ನನ್ನ ಗಮನದಲ್ಲಿದೆ ಎಂದು ಹೇಳಿದ್ದರು.

‘ನಾವು ಸಾಧ್ಯವಾದಷ್ಟು ಬೇಗ ಯುದ್ಧವನ್ನು ನಿಲ್ಲಿಸಲು ನಮ್ಮ ಕೈಲಾದಷ್ಟು ಪ್ರಯತ್ನಪಡುತ್ತೇವೆ. ಆದರೂ, ದುರಾದೃಷ್ಟವಶಾತ್, ಎದುರಾಳಿ ಉಕ್ರೇನ್ ನಾಯಕತ್ವವು ಮಾತುಕತೆಯ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಮತ್ತು ಮಿಲಿಟರಿ ವಿಧಾನಗಳ ಮೂಲಕ ತನ್ನ ಗುರಿಗಳನ್ನು ಸಾಧಿಸಲು ಬಯಸುವುದಾಗಿ ಘೋಷಿಸಿದೆ.' ಯುದ್ಧಭೂಮಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ನಾವು ನಿಮಗೆ ಸದಾ ತಿಳಿಸುತ್ತೇವೆ’ಎಂದು ಪುಟಿನ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.