ADVERTISEMENT

ಬಡ ರಾಷ್ಟ್ರಗಳಿಗೆ ಹೆಚ್ಚು ಲಸಿಕೆ: ಇಟಲಿಯಲ್ಲಿ ವಿಶ್ವ ನಾಯಕರ ಶೃಂಗಸಭೆ ಕರೆ

ಇಟಲಿಯಲ್ಲಿ ವಿಶ್ವ ನಾಯಕರ ಶೃಂಗಸಭೆ: ಮೋದಿ ಭಾಗಿ

ಏಜೆನ್ಸೀಸ್
Published 30 ಅಕ್ಟೋಬರ್ 2021, 21:11 IST
Last Updated 30 ಅಕ್ಟೋಬರ್ 2021, 21:11 IST
ಅಮೆರಿಕ ಅಧ್ಯಕ್ಷ ಜೊ ಬೈಡನ್ ಜೊತೆ ಪ್ರಧಾನಿ ನರೇಂದ್ರ ಮೋದಿ–ಪಿಟಿಐ ಚಿತ್ರ
ಅಮೆರಿಕ ಅಧ್ಯಕ್ಷ ಜೊ ಬೈಡನ್ ಜೊತೆ ಪ್ರಧಾನಿ ನರೇಂದ್ರ ಮೋದಿ–ಪಿಟಿಐ ಚಿತ್ರ   

ರೋಮ್: ಜಗತ್ತಿನ ಬಡರಾಷ್ಟ್ರಗಳು, ಕೋವಿಡ್ ಲಸಿಕೆ ಪಡೆದುಕೊಳ್ಳುವ ವೇಗವನ್ನು ವೃದ್ಧಿಸಬೇಕಿದೆ ಎಂದುಇಟಲಿ ಪ್ರಧಾನಿ ಮಾರಿಯೋ ಡ್ರಾಗ್ಹಿ ಕರೆ ನೀಡಿದ್ದಾರೆ.

ಶನಿವಾರ ಇಲ್ಲಿ ಜಿ–20 ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ಲಸಿಕೆ ಅಂತರವನ್ನು ಪ್ರಸ್ತಾಪಿಸಿದರು. ಜಗತ್ತಿನ ಬಡ ದೇಶಗಳ ಶೇ 3ರಷ್ಟು ಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಸಿರಿವಂತ ದೇಶಗಳ ಶೇ 70ರಷ್ಟು ಜನರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ ಎಂದು ಅವರು ವಿವರಿಸಿದರು.

ಕಡಿಮೆ ಆದಾಯದ ದೇಶಗಳಿಗೆ ಹೆಚ್ಚಿನ ಸಾಮೂಹಿಕ ಸಹಾಯಕ್ಕಾಗಿ ಕರೆ ನೀಡಲಾಯಿತು. ಹವಾಮಾನ ಬದಲಾವಣೆ, ಲಸಿಕೆ, ಆರ್ಥಿಕತೆ ಚೇತರಿಕೆ, ಅಂತರರಾಷ್ಟ್ರೀಯ ತೆರಿಗೆ ವಿಷಯಗಳು ಕೋವಿಡ್ ನಂತರ ನಡೆದ ವಿಶ್ವ ನಾಯಕರ ಮೊದಲ ಮುಖತಃ ಶೃಂಗಸಭೆಯಲ್ಲಿ ಚರ್ಚೆಗೆ ಬಂದವು.

ADVERTISEMENT

ವಿಶ್ವ ನಾಯಕರ ಭೇಟಿ: ಜಿ–20 ಶೃಂಗಸಭೆಯ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಮೆರಿಕ ಅಧ್ಯಕ್ಷ ಜೊ ಬೈಡನ್ ಸೇರಿದಂತೆ ವಿಶ್ವ ನಾಯಕರೊಂದಿಗೆ ಸಂವಾದ ನಡೆಸಿದರು.

ಪ್ರಧಾನಿ ಮೋದಿ ಅವರು ಬೈಡನ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಭೇಟಿಯಾಗುತ್ತಿರುವ ಚಿತ್ರಗಳನ್ನು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ. ಬೈಡನ್ ಅವರನ್ನು ಆಲಂಗಿಸಿಕೊಂಡ ಮೋದಿ, ಅವರೊಂದಿಗೆ ಸಂಕ್ಷಿಪ್ತ ಮಾತುಕತೆ ನಡೆಸಿದರು. ಮೋದಿ ಅವರನ್ನು ಬೈಡನ್ ಸೆ.24ರಂದು ಶ್ವೇತಭವನಕ್ಕೆ ಆಹ್ವಾನಿಸಿದ್ದರು.

ಜರ್ಮನಿ ಚಾನ್ಸಲರ್ ಅಂಗೆಲಾ ಮರ್ಕೆಲ್, ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ ಇನ್, ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಸಿಂಗಪುರದ ಪ್ರಧಾನಿ ಲೀ ಸೀನ್ ಲೂಂಗ್ ಸೇರಿದಂತೆ ಇತರ ನಾಯಕರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.

---

ಇಂಧನ: ಭಾರತ– ಇಟಲಿ ಸಹಯೋಗ

ರೋಮ್/ನವದೆಹಲಿ:ಹಸಿರು ಜಲಜನಕ ಅಭಿವೃದ್ಧಿ, ನವೀಕರಿಸಬಹುದಾದ ಇಂಧನ ಕಾರಿಡಾರ್‌ ಸ್ಥಾಪನೆ ಮತ್ತು ನೈಸರ್ಗಿಕ ಅನಿಲ ವಲಯದಲ್ಲಿ ಜಂಟಿ ಯೋಜನೆಗಳನ್ನು ಅನ್ವೇಷಿಸಲುಭಾರತ ಮತ್ತು ಇಟಲಿ ಒಪ್ಪಿಕೊಂಡಿವೆ. ಇಂಧನ ಪರಿವರ್ತನೆ ಕ್ಷೇತ್ರದಲ್ಲಿ ಪಾಲುದಾರಿಕೆಯನ್ನು ಬಲಪಡಿಸಲು,ಭಾರತೀಯ ಮತ್ತು ಇಟಲಿ ಕಂಪನಿಗಳ ಜಂಟಿ ಹೂಡಿಕೆಯನ್ನು ಉತ್ತೇಜಿಸಲು ಉಭಯ ರಾಷ್ಟ್ರಗಳು ಪ್ರಯತ್ನಿಸಿದವು.

ಭಾರತದಲ್ಲಿ ಹಸಿರು ಹೈಡ್ರೋಜನ್ ಮತ್ತು ಸಂಬಂಧಿತ ತಂತ್ರಜ್ಞಾನಗಳ ಅಭಿವೃದ್ಧಿ ಹಾಗೂ 2030ರೊಳಗೆ 450 ಗಿಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಭಾರತದಲ್ಲಿ ಬೃಹತ್ ಹಸಿರು ಕಾರಿಡಾರ್ ಯೋಜನೆಗಾಗಿ ಒಟ್ಟಾಗಿ ಕೆಲಸ ಮಾಡಲು ಉಭಯ ದೇಶಗಳು ಒಪ್ಪಂದಕ್ಕೆ ಬಂದಿವೆ.

ನೈಸರ್ಗಿಕ ಅನಿಲ ಕ್ಷೇತ್ರದಲ್ಲಿ ಜಂಟಿ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಇಟಲಿ ಮತ್ತು ಭಾರತೀಯ ಕಂಪನಿಗಳನ್ನು ಉತ್ತೇಜಿಸಲು ಒಪ್ಪಿಕೊಂಡಿವೆ. ಡಿಕಾರ್ಬೊನೈಸೇಶನ್, ಸ್ಮಾರ್ಟ್ ಸಿಟಿಗಳು ಮತ್ತು ನಗರ ಸಾರ್ವಜನಿಕ ಸಾರಿಗೆಯ ವಿದ್ಯುದ್ದೀಕರಣದಂತಹ ನಿರ್ದಿಷ್ಟ ಕ್ಷೇತ್ರಗಳಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಉತ್ತೇಜಿಸಲು ಉಭಯ ಪ್ರಧಾನಿಗಳು ಒಪ್ಪಿಕೊಂಡಿದ್ದಾರೆ ಎಂದು ಜಂಟಿ ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.