ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್
– ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಬಾಂಗ್ಲಾದೇಶದ ಇತ್ತೀಚಿನ ಪರಿಸ್ಥಿತಿ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಸನ್ನಿವೇಶವನ್ನು ಭಾರತ ಹೇಗೆ ನೋಡುತ್ತದೆ ಎನ್ನುವುದನ್ನೂ ಚರ್ಚಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.
ಗುರುವಾರ (ಭಾರತದಲ್ಲಿ ಶುಕ್ರವಾರ) ಶ್ವೇತಭವನದಲ್ಲಿ ಉಭಯ ನಾಯಕರ ನಡುವೆ ಮಾತುಕತೆ ನಡೆಯಿತು. ಈ ವೇಳೆ ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಿಸ್ರಿ, ಉಭಯ ನಾಯಕರ ನಡುವೆ ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿಯೂ ಚರ್ಚೆಯ ವಿಷಯವಾಗಿತ್ತು ಎಂದು ಅವರು ಹೇಳಿದ್ದಾರೆ.
‘ಬಾಂಗ್ಲಾದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಭಾರತವು ಪರಿಸ್ಥಿತಿಯನ್ನು ಹೇಗೆ ನೋಡುತ್ತದೆ ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ಹಾಗೂ ಕಳವಳವನ್ನು ಪ್ರಧಾನಿ ಮೋದಿ ಹಂಚಿಕೊಂಡರು’ ಎಂದು ಮಿಸ್ರಿ ತಿಳಿಸಿದ್ದಾರೆ.
‘ಬಾಂಗ್ಲಾದೇಶದದೊಂದಿದೆ ರಚನಾತ್ಮಕ ಮತ್ತು ಸ್ಥಿರ ಸಂಬಂಧಗಳನ್ನು ಮುಂದುವರಿಸುವ ದಿಕ್ಕಿನಲ್ಲಿ ಪರಿಸ್ಥಿತಿ ಸಾಗಲಿದೆ ಎಂದು ನಾವು ಭಾವಿಸುತ್ತೇವೆ’ ಎಂದರು.
ಬಾಂಗ್ಲಾದೇಶದಲ್ಲಿ ಆಂತರಿಕ ಸಂಘರ್ಷದ ವೇಳೆ ಪಲಾಯನ ಮಾಡಿ ಬಂದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಭಾರತ ಆಶ್ರಯ ನೀಡಿದೆ. ಇದು ಉಭಯ ರಾಷ್ಟ್ರಗಳ ಸಂಬಂಧವನ್ನು ಕೆಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.