ADVERTISEMENT

ಮೋದಿ@ವಾಷಿಂಗ್ಟನ್: ಮೊದಲ ದಿನವೇ ಕಮಲಾ ಹ್ಯಾರಿಸ್‌ ಭೇಟಿ, ಸಿಇಒಗಳೊಂದಿಗೆ ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಸೆಪ್ಟೆಂಬರ್ 2021, 3:42 IST
Last Updated 23 ಸೆಪ್ಟೆಂಬರ್ 2021, 3:42 IST
ಪ್ರಧಾನಿ ನರೇಂದ್ರ ಮೋದಿ ಅವರನ್ನು ವಾಷಿಂಗ್ಟನ್‌ನಲ್ಲಿ ಬರಮಾಡಿಕೊಂಡ ಭಾರತೀಯ ಸಮುದಾಯ
ಪ್ರಧಾನಿ ನರೇಂದ್ರ ಮೋದಿ ಅವರನ್ನು ವಾಷಿಂಗ್ಟನ್‌ನಲ್ಲಿ ಬರಮಾಡಿಕೊಂಡ ಭಾರತೀಯ ಸಮುದಾಯ   

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಸ್ಥಳೀಯ ಕಾಲಮಾನ) ವಾಷಿಂಗ್ಟನ್‌ಗೆ ಬಂದಿಳಿದರು. ಅಮೆರಿಕದಲ್ಲಿನ ಭಾರತೀಯ ಸಮುದಾಯದವರು ಮೋದಿ ಅವರನ್ನು ಬರ ಮಾಡಿಕೊಂಡರು. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರೊಂದಿಗೆ ಮೊದಲ ಬಾರಿಗೆ ಮುಖತಃ ಭೇಟಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾಷಣ ಸೇರಿದಂತೆ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿ ಹಲವು ಸಭೆಗಳಲ್ಲಿ ಭಾಗಿಯಾಗಲಿದ್ದಾರೆ.

ಮಳೆಯ ನಡುವೆಯೂ ಹಲವು ಭಾರತೀಯರು ವಾಯುಪಡೆಯ ನೆಲೆಯಲ್ಲಿ ಮೋದಿ ಅವರನ್ನು ಸ್ವಾಗತಿಸಿದರು. ಸ್ವಾಗತ ಕೋರಿರುವ ಭಾರತೀಯ ಸಮುದಾಯಕ್ಕೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ. ಭಾರತೀಯರು ಜಗತ್ತಿನಾದ್ಯಂತ ತಲುಪಿದ್ದಾರೆ ಹಾಗೂ ಗುರುತಿಸಿಕೊಂಡಿದ್ದಾರೆ. ಎಲ್ಲ ಕಡೆಯಲ್ಲೂ ನಾವು ತಲುಪಿರುವುದು ನಮ್ಮ ಬಲವೂ ಆಗಿದೆ ಎಂದು ಟ್ವೀಟಿಸಿದ್ದಾರೆ.

ವಾಷಿಂಗ್ಟನ್‌ಗೆ ಬಂದಿಳಿಯುತ್ತಿದ್ದಂತೆ ಟ್ವೀಟಿಸಿರುವ ಪ್ರಧಾನಿ ಮೋದಿ, 'ಮುಂದಿನ ಎರಡು ದಿನಗಳಲ್ಲಿ ಅಮೆರಿಕ ಅಧ್ಯಕ್ಷರಾದ ಜೋ ಬೈಡನ್‌, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿದಾ ಸುಗಾ ಅವರನ್ನು ಭೇಟಿ ಮಾಡಲಿದ್ದೇನೆ. ಕ್ವಾಡ್‌ ಸಭೆಯಲ್ಲಿ ಭಾಗಿಯಾಗಲಿದ್ದೇನೆ ಹಾಗೂ ಭಾರತದಲ್ಲಿನ ಅವಕಾಶಗಳ ಕುರಿತು ಪ್ರಮುಖ ಕಂಪನಿಗಳ ಸಿಇಒಗಳೊಂದಿಗೆ ಮಾತುಕತೆ ನಡೆಸಲಿದ್ದೇನೆ' ಎಂದಿದ್ದಾರೆ.

ADVERTISEMENT

2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿದ ನಂತರ ಏಳನೇ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. 2015ರಲ್ಲಿ ಭಾರತೀಯ–ಅಮೆರಿಕನ್‌ ಸಮುದಾಯದೊಂದಿಗೆ ಕಾರ್ಯಕ್ರಮ, ಅನಂತರ ಸಿಲಿಕಾನ್‌ ವ್ಯಾಲಿ ಭೇಟಿ ಹಾಗೂ ಕೊನೆಯದಾಗಿ 2019ರಲ್ಲಿ ಹೌಡಿ–ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ನಿನ್ನೆ ಮಧ್ಯಾಹ್ನ ನವದೆಹಲಿಯಿಂದ ವಿಶೇಷ ವಿಮಾನದಲ್ಲಿ (ಹೊಸದಾಗಿ ನಿಯೋಜನೆಯಾಗಿರುವ ಬೋಯಿಂಗ್‌ 777) ಪ್ರಯಾಣ ಆರಂಭಿಸಿದ ಪ್ರಧಾನಿ ಮೋದಿ ಭಾರತೀಯ ಕಾಲಮಾನ ಗುರುವಾರ ಬೆಳಗಿನ ಜಾವ (ವಾಷಿಂಗ್ಟನ್‌ ಕಾಲಮಾನ ಬುಧವಾರ ಸಂಜೆ) ವಾಷಿಂಗ್ಟನ್‌ ಡಿಸಿ ತಲುಪಿದರು. ಹತ್ತಾರು ಗಂಟೆಗಳ ವಿಮಾನ ಪ್ರಯಾಣದಲ್ಲಿ ಅವರು ಹಲವು ಕಡತಗಳ ಕೆಲಸಗಳನ್ನು ಪೂರೈಸಿರುವುದಾಗಿ ತಿಳಿಸಿದ್ದಾರೆ.

ಭಾರತದಿಂದ ಹೊರಡುವ ಮುನ್ನ ಮಾತನಾಡಿದ್ದ ಪ್ರಧಾನಿ, 'ಭಾರತ-ಅಮೆರಿಕ ನಡುವಣ ಸಮಗ್ರ ಪಾಲುದಾರಿಕೆ ಬಲಪಡಿಸಲು ಮತ್ತು ಜಪಾನ್, ಆಸ್ಟ್ರೇಲಿಯಾದೊಂದಿಗಿನ ಬಾಂಧವ್ಯವನ್ನು ಬಲಪಡಿಸಲು ತಮ್ಮ ಅಮೆರಿಕ ಭೇಟಿ ಒಂದು ಸುಸಂದರ್ಭ' ಎಂದು ಹೇಳಿದ್ದರು.

ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ವಿವರ ಹೀಗಿದೆ:

* ಇಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರೊಂದಿಗೆ ಸುಮಾರು ಒಂದು ಗಂಟೆ ಚರ್ಚೆ. ಮುಖ್ಯವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉಭಯ ದೇಶಗಳ ಸಹಕಾರದ ಬಗ್ಗೆ ಚರ್ಚಿಸಲಿದ್ದಾರೆ. ಕೋವಿಡ್‌–19 ಸಂಕಷ್ಟದ ಸಂದರ್ಭದಲ್ಲಿ ಜೂನ್‌ನಲ್ಲಿ ಕಮಲಾ ಹ್ಯಾರಿಸ್‌ ಅವರು ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು.

* ಕ್ವಾಡ್‌ ಸದಸ್ಯ ರಾಷ್ಟ್ರಗಳ ಪ್ರಮುಖರಾದ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿದಾ ಸುಗಾ ಅವರೊಂದಿಗೆ ಪ್ರತ್ಯೇಕ ಸಭೆ.

* ವಾಷಿಂಗ್ಟನ್‌ನಲ್ಲೇ ಜಾಗತಿಕ ಕಂಪನಿಗಳ ಪ್ರಮುಖ ಸಿಇಒಗಳೊಂದಿಗೆ ನೇರ ಮಾತುಕತೆ ನಡೆಯಲಿದೆ. ಕ್ವಾಲ್‌ಕಾಮ್‌ನ ಕ್ರಿಸ್ಟಿಯಾನೊ ಎ ಅಮಾನ್‌, ಅಡೋಬಿಯ ಶಾಂತನು ನಾರಾಯೆಣ್‌, ಫಸ್ಟ್‌ ಸೋಲಾರ್‌ನ ಮಾರ್ಕ್‌ ವಿಡ್ಮರ್‌, ಜನರಲ್‌ ಆಟೊಮಿಕ್ಸ್‌ನ ವಿವೇಕ್‌ ಲಾಲ್‌ ಹಾಗೂ ಬ್ಲ್ಯಾಕ್‌ಸ್ಟೋನ್‌ನ ಸ್ಟೀಫನ್‌ ಅವರೊಂದಿಗೆ ಭೇಟಿ ನಿಗದಿಯಾಗಿದೆ.

* ಶುಕ್ರವಾರ ಕ್ವಾಡ್‌ ಸಭೆ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರೊಂದಿಗೆ ಮೊದಲ ಬಾರಿಗೆ ಮುಖತಃ ಭೇಟಿ.

* ಅಮೆರಿಕ ಪ್ರವಾಸದ ಕೊನೆಯ ದಿನವಾದ ಸೆಪ್ಟೆಂಬರ್‌ 25ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.