ADVERTISEMENT

Election of New Pope: ಚುನಾವಣೆ ಮೂಲಕ ನೂತನ ಪೋಪ್‌ ಆಯ್ಕೆ

ಏಜೆನ್ಸೀಸ್
Published 21 ಏಪ್ರಿಲ್ 2025, 23:33 IST
Last Updated 21 ಏಪ್ರಿಲ್ 2025, 23:33 IST
<div class="paragraphs"><p>ಅಗಲಿದ ಪೋಪ್ ಫ್ರಾನ್ಸಿಸ್‌ಗೆ ಅಂತಿಮ ನಮನ</p></div>

ಅಗಲಿದ ಪೋಪ್ ಫ್ರಾನ್ಸಿಸ್‌ಗೆ ಅಂತಿಮ ನಮನ

   

– ರಾಯಿಟರ್ಸ್ ಚಿತ್ರ

ನೂತನ ಪೋಪ್‌ ಆಯ್ಕೆಗೆ ಶತಮಾನಗಳ ಇತಿಹಾಸವಿದೆ. ಸೇಂಟ್‌ ಪೀಟರ್‌ ಅವರು (ದೊರಕಿರುವ ಐತಿಹಾಸಿಕ ಸಾಕ್ಷ್ಯಗಳ ಅನುಸಾರ) ಮೊದಲ ಪೋಪ್ ಆಗಿದ್ದರು. ತಮ್ಮ ಮುಂದಿನ ಪೋಪ್‌ನ ನೇಮಕವನ್ನು ಅವರೇ ಮಾಡಿದ್ದರಂತೆ. ಕಾಲ ಕಳೆದಂತೆ ಈ ಸಂಪ್ರದಾಯವು ಅಂತ್ಯವಾಗಿ ಚುನಾವಣೆ ಮೂಲಕ ಪೋಪ್‌ ಆಯ್ಕೆಯನ್ನು ಮಾಡಲಾಗುತ್ತಿದೆ. ಕಾಲ ಕಾಲಕ್ಕೆ ಚುನಾವಣಾ ಪ್ರಕ್ರಿಯೆ ಕೂಡ ಬದಲಾಗಿದೆ. ತಮ್ಮ ಸಂವಿಧಾನಕ್ಕೆ ತಿದ್ದುಪಡಿ ತಂದುಕೊಳ್ಳುವ ಮೂಲಕ ಬದಲಾವಣೆಗಳನ್ನು ಮಾಡಲಾಗಿದೆ. ಪೋಪ್‌ ಆಯ್ಕೆ ಹೇಗೆ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ:

ADVERTISEMENT
  • ಪೋಪ್‌ ನಿಧನವಾದ 15 ಅಥವಾ 20 ದಿನಗಳ ಬಳಿಕ ಮುಂದಿನ ಪೋಪ್‌ನ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತವೆ

  • ತಮ್ಮ ಆಡಳಿತಕ್ಕೆ ಸೂಕ್ತ ಸಲಹೆ–ಸೂಚನೆಗಳನ್ನು ನೀಡಲು, ಪೋಪ್‌ ಅವರು ಸಮಾಲೋಚನಾ ಸಮಿತಿಯೊಂದನ್ನು ರಚಿಸುತ್ತಾರೆ. ವಿವಿಧ ದೇಶಗಳ ಬಿಷಪ್‌ಗಳನ್ನು ಕಾರ್ಡಿನಲ್‌ಗಳನ್ನಾಗಿ ಈ ಸಮಿತಿಗೆ ನೇಮಿಸಲಾಗುತ್ತದೆ. ಈ ಸಮಿತಿಯೇ ಮುಂದಿನ ಪೋಪ್‌ ಅನ್ನು ಆಯ್ಕೆ ಮಾಡುತ್ತದೆ

  • ಧರ್ಮದೀಕ್ಷೆ ಪಡೆದ ರೋಮನ್ ಕ್ಯಾಥೋಲಿಕ್‌ ಸಮುದಾಯದ ವ್ಯಕ್ತಿಯೂ ಪೋಪ್ ಆಗಬಹುದು. ಆದರೆ, ಹಲವು ಶತಮಾನಗಳಿಂದ ಕಾರ್ಡಿನಲ್‌ಗಳಲ್ಲೇ ಒಬ್ಬರು ಆಯ್ಕೆಯಾಗುತ್ತಿದ್ದಾರೆ

  • 252: ಒಟ್ಟು ಕಾರ್ಡಿನಲ್‌ಗಳ ಸಂಖ್ಯೆ

  • 136: 80 ವರ್ಷ ಒಳಗಿರುವ ಕಾರ್ಡಿನಲ್‌ಗಳ ಸಂಖ್ಯೆ (80 ವರ್ಷ ಒಳಗಿನವರು ಮಾತ್ರವೇ ಪೋಪ್‌ ಆಯ್ಕೆ ಚುನಾವಣೆಯಲ್ಲಿ ಮತ ಚಲಾಯಿಸಬಹುದಾಗಿದೆ. 80 ವರ್ಷ ಮೇಲ್ಪಟ್ಟವರು ಚರ್ಚೆಯಲ್ಲಿ ಮಾತ್ರವೇ ಭಾಗವಹಿಸಬಹುದು)

  • 6: ಭಾರತ ಕಾರ್ಡಿನಲ್‌ಗಳ ಸಂಖ್ಯೆ (ಮತಚಾಯಿಸುವ ಅಧಿಕಾರ ಇರುವುದು ನಾಲ್ವರಿಗೆ ಮಾತ್ರ)

  • 92: ಮೂರನೇ ಎರಡರಷ್ಟು ಮತಕ್ಕಿಂತ ಒಂದು ಹೆಚ್ಚಿನ ಮತ ಪಡೆಯುವ ವ್ಯಕ್ತಿಯು ನೂತನ ಪೋಪ್‌ ಆಗಿ ಆಯ್ಕೆಯಾಗುತ್ತಾರೆ

ಆಯ್ಕೆ ಪ್ರಕ್ರಿಯೆ ಹೇಗೆ?

ಪೋಪ್‌ ಆಯ್ಕೆಗಾಗಿ ಸಂತಾ ಮಾರ್ತಾನಲ್ಲಿ ಕಾರ್ಡಿನಲ್‌ಗಳ ಚರ್ಚೆಗಳು ನಡೆಯುತ್ತವೆ. ಸಿಸ್ಟೀನ್ ಛಾಪೆಲ್‌ನಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತದೆ. ಈ ವೇಳೆ ಸಂತಾ ಮಾರ್ತಾವನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗುತ್ತದೆ. ಕಾರ್ಡಿನಲ್‌ಗಳು ಹೊರ ಜಗತ್ತಿನ ಸಂಪರ್ಕವನ್ನು ಕಡಿದುಕೊಳ್ಳಬೇಕಾಗುತ್ತದೆ. ಮುಂದಿನ ಪೋಪ್‌ನ ಗುಣಲಕ್ಷಣಗಳು ಏನಿರಬೇಕು? ಚರ್ಚ್‌ ಮುಂದೆ ಇರುವ ಸವಾಲುಗಳೇನು? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತವೆ. ಎಲ್ಲ ಕಾರ್ಡಿನಲ್‌ಗಳು ಈ ಚರ್ಚೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಚರ್ಚೆಯಲ್ಲಿ ಯಾರು ಹೇಗೆ ಮಾತನಾಡುತ್ತಾರೆ, ಅವರ ಧಾರ್ಮಿಕ ಜ್ಞಾನ, ಪಾಂಡಿತ್ಯಗಳ ಆಧಾರದಲ್ಲಿ ಕಾರ್ಡಿನಲ್‌ಗಳು ಅವರಲ್ಲೇ ಒಬ್ಬರನ್ನು ಆಯ್ಕೆ ಮಾಡುತ್ತಾರೆ.

ಹಲವು ದಿನಗಳವರೆಗೆ ಈ ಪ್ರಕ್ರಿಯೆ ನಡೆಯಲಿದೆ. ಯಾವುದೇ ವ್ಯಕ್ತಿಗೆ ಮೂರನೇ ಎರಡರಷ್ಟು ಮತಗಳು ದೊರಕುವವರೆಗೂ ಪ್ರತಿನಿತ್ಯವೂ ಎರಡು ಬಾರಿ ಮತದಾನ ನಡೆಯಲಿದೆ. ಈ ಎಲ್ಲ ಪ್ರಕ್ರಿಯೆಗಳು ಬಹಳ ರಹಸ್ಯವಾಗಿ ನಡೆಯುತ್ತವೆ. ಪ್ರತಿ ಬಾರಿ ಮತದಾನ ನಡೆದ ಬಳಿಕ ಫಲಿತಾಂಶವನ್ನು ಬಹಿರಂಗ ಮಾಡಲಾಗುತ್ತದೆ. ಬಹುಮತ ಪಡೆದರೆ, ಫಲಿತಾಂಶ ಬಂದ ಒಂದು ಗಂಟೆಯ ಒಳಗೆ ನೂತನ ಪೋಪ್‌, ತಮ್ಮ ನಿವಾಸದ ಬಾಲ್ಕನಿಯಿಂದ ಕೈಬೀಸುತ್ತಾರೆ.

ಕಪ್ಪು ಮತ್ತು ಬಿಳಿ ಹೊಗೆ ಎಂಬ ಸಂಕೇತ

ನೂತನ ಪೋಪ್‌ ಆಯ್ಕೆಯ ಬಗ್ಗೆ ಪ್ರತಿನಿತ್ಯವೂ ಜನರಿಗೆ ಮಾಹಿತಿ ನೀಡಲಾಗುತ್ತದೆ. ಇದಕ್ಕಾಗಿ ಕಪ್ಪು ಮತ್ತು ಬಳಿ ಹೊಗೆಗಳೆಂಬ ಸಂಕೇತಗಳನ್ನು ರೂಪಿಸಿಕೊಳ್ಳಲಾಗಿದೆ. ಸಿಸ್ಟೀನ್‌ ಛಾಪೆಲ್‌ ಕಟ್ಟಡದಲ್ಲಿರುವ ಚಿಮಿಣಿಯ ಮೂಲಕ ಈ ಸಂಕೇತವನ್ನು ರವಾನಿಸಲಾಗುತ್ತದೆ. ಪೋಪ್‌ ಆಯ್ಕೆ ಪ್ರಕ್ರಿಯೆ ಪೂರ್ಣವಾಗಲಿಲ್ಲ ಎಂದರೆ, ಕಪ್ಪು ಹೊಗೆಯನ್ನು ಹೊರಸೂಸಲಾಗುತ್ತದೆ. ನೂತನ ಪೋಪ್‌ ಆಯ್ಕೆ ಪೂರ್ಣಗೊಂಡರೆ, ಬಿಳಿ ಹೊಗೆ ಬಿಡಲಾಗುತ್ತದೆ.

ಮತದಾನ ಪ್ರಕ್ರಿಯೆಯು ರಹಸ್ಯವಾಗಿ ನಡೆಯುತ್ತದೆ. ಆದ್ದರಿಂದ ಪ್ರತಿಬಾರಿ ಮತದಾನ ನಡೆದು ಫಲಿತಾಂಶ ಬಹಿರಂಗಗೊಂಡ ಬಳಿಕ ಮತಪತ್ರಗಳನ್ನು ಸುಡಲಾಗುತ್ತದೆ. ಪ್ರತಿನಿತ್ಯವೂ ಹೊಗೆಯ ಸಂಕೇತವನ್ನು ನೀಡಬೇಕಾಗಿರುವುದರಿಂದ ಮತಪತ್ರಗಳನ್ನೂ ಸುಡಲಾಗುತ್ತದೆ. ಸಾಂಪ್ರದಾಯಿಕವಾಗಿ ಕಪ್ಪು ಹೂಗೆ ಮೂಡಿಸಲು, ಮತಪತ್ರಗಳ ಜೊತೆಯಲ್ಲಿ ಒಣ ಹುಲ್ಲುಗಳನ್ನು ಸುಡಲಾಗುತ್ತಿತ್ತು. ಬಿಳಿ ಹೊಗೆಗಾಗಿ ಹಸಿ ಹಲ್ಲು ಬಳಸಲಾಗುತ್ತಿತ್ತು. ಆಧುನಿಕ ಯುಗದಲ್ಲಿ ರಾಸಾಯನಿಕಗಳನ್ನು ಬಳಸಿ ಹೊಗೆಯನ್ನು ಮೂಡಿಸಲಾಗುತ್ತದೆ.

ಮುಂದಿನ ಪೋಪ್‌ ಯಾರಾಗಬಹುದು?

  • ಕಾರ್ಡಿನಲ್‌ ಪಿಯೆಟ್ರೊ ಪಾರೊಲಿನ್‌, ಇಟಲಿ

  • ಕಾರ್ಡಿನಲ್‌ ಮಾರ್ಕ್‌ ಒಲೆಟ್‌, ಕೆನಡಾ

  • ಕಾರ್ಡಿನಲ್‌ ಕ್ರಿಸ್ಟೊಫ್‌ ಶೌನ್‌ಬೋರ್ನ್‌, ಆಸ್ಟ್ರಿಯಾ

  • ಕಾರ್ಡಿನಲ್‌ ಲೂಯಿಸ್‌ ಟ್ಯಾಗಲ್‌, ಫಿಲಿಪ್ಪೀನ್ಸ್‌

  • ಕಾರ್ಡಿನಲ್‌ ಮ್ಯಾಟೊ ಜುಪ್ಪಿ, ಇಟಲಿ

ಬೆರ್ಗೋಲಿಯೊನಿಂದ ಫ್ರಾನ್ಸಿಸ್‌ವರೆಗೆ

  • 1936: ಅರ್ಜೆಂಟೀನಾದಲ್ಲಿ ಒರ್ಗೆ ಮಾರಿಯೊ ಬೆರ್ಗೊಲಿಯೊ (ಪೋಪ್‌ ಫ್ರಾನ್ಸಿಸ್‌ ಅವರ ಮೊದಲ ಹೆಸರು) ಜನನ

  • 1992: ಬಿಷಪ್‌ ಆಗಿ ನೇಮಕ

  • 2001: ಕಾರ್ಡಿನಲ್‌ ಆಗಿ ನೇಮಕ

  • 2013: ಪೋಪ್‌ ಬೆನೆಡಿಕ್ಟ್‌ ರಾಜೀನಾಮೆ ಬಳಿಕ ನೂತನ ಪೋಪ್‌ ಆಗಿ ನೇಮಕ

  • 2025: ನಿಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.