ADVERTISEMENT

ಪೋಪ್ ಫ್ರಾನ್ಸಿಸ್: ಸಂಪ್ರದಾಯ ಮುರಿದ ಸುಧಾರಣಾವಾದಿ

ಏಜೆನ್ಸೀಸ್
Published 21 ಏಪ್ರಿಲ್ 2025, 23:48 IST
Last Updated 21 ಏಪ್ರಿಲ್ 2025, 23:48 IST
<div class="paragraphs"><p>ಪೋಪ್ ಫ್ರಾನ್ಸಿಸ್</p></div>

ಪೋಪ್ ಫ್ರಾನ್ಸಿಸ್

   

–ರಾಯಿಟರ್ಸ್‌ ಚಿತ್ರ

ವ್ಯಾಟಿಕನ್‌ ಸಿಟಿ: ಪೋಪ್ ಫ್ರಾನ್ಸಿಸ್ ಅವರು ಒಬ್ಬ ‘ಸುಧಾರಣಾವಾದಿ ಧರ್ಮಗುರು’ ಆಗಿ ಇತಿಹಾಸದ ಪುಟಗಳಲ್ಲಿ ಉಳಿಯಲಿದ್ದಾರೆ. ಶತಮಾನಗಳಿಂದ ಪಾಲಿಸಿಕೊಂಡು ಬರುತ್ತಿದ್ದ ಕೆಲವು ಸಂಪ್ರದಾಯಗಳನ್ನು ಮುರಿದು ಕ್ಯಾಥೊಲಿಕ್‌ ಚರ್ಚ್‌ ಅನ್ನು ‘ಸಹಾನುಭೂತಿಯ’ ಕೇಂದ್ರವನ್ನಾಗಿಸಲು ಅವರು ಶ್ರಮಪಟ್ಟರು.

ADVERTISEMENT

‘ಜನರ ಪೋಪ್’ ಎಂದೇ ಕರೆಯಲ್ಪಡುವ ಅರ್ಜೆಂಟೀನಾದ ಧರ್ಮಗುರು, ತುಳಿತಕ್ಕೊಳಗಾದ ಜನರ ಪರವಾಗಿದ್ದರು. ಜಗತ್ತಿನಾದ್ಯಂತ ಕೋಟ್ಯಂತರ ಮಂದಿಯ ಪ್ರೀತಿಗೆ ಪಾತ್ರರಾಗಿದ್ದ ಸಂದರ್ಭದಲ್ಲೇ, ಚರ್ಚ್‌ನೊಳಗಿನ ಸಂಪ್ರದಾಯವಾದಿಗಳಿಂದ ವಿರೋಧವನ್ನೂ ಎದುರಿಸಿದ್ದಾರೆ.

ವಲಸಿಗರಿಂದ ಹಿಡಿದು ಹವಾಮಾನ ಬದಲಾವಣೆಯಿಂದ ಸಂಕಷ್ಟ ಎದುರಿಸಿದ ಸಮುದಾಯಗಳವರೆಗೆ ಅತ್ಯಂತ ಯಾತನಾಮಯ ಬದುಕು ಸಾಗಿಸುವವರ ಜತೆ ದೃಢವಾಗಿ ನಿಂತಿದ್ದರು.

2013ರ ಮಾರ್ಚ್‌ನಲ್ಲಿ ಪೋಪ್‌ ಆಗಿ ಆಯ್ಕೆಯಾದ ದಿನದಿಂದಲೂ ಕ್ಯಾಥೊಲಿಕ್‌ ಚರ್ಚ್‌ನ ನಾಯಕರಾಗಿ ತಮ್ಮ ಛಾಪು ಮೂಡಿಸಲು ಅವರು ಉತ್ಸುಕರಾಗಿದ್ದರು.

13ನೇ ಶತಮಾನದಲ್ಲಿ ಪೋಪ್‌ ಆಗಿದ್ದ, ತನ್ನೆಲ್ಲಾ ಸಂಪತ್ತನ್ನು ತ್ಯಜಿಸಿ ಬಡವರಿಗಾಗಿ ಜೀವನವನ್ನು ಮುಡಿಪಾಗಿಟ್ಟ ಸೇಂಟ್‌ ಫ್ರಾನ್ಸಿಸ್‌ ಬಳಿಕ ಫ್ರಾನ್ಸಿಸ್‌ ಎಂಬ ಹೆಸರನ್ನು ಪಡೆದ ಮೊದಲ ಪೋಪ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. 

‘ಚರ್ಚ್‌ಗಳು ಬಡವರ ಪರವಾಗಿ ಇರಬೇಕೆಂದು ಬಯಸುತ್ತಿದ್ದೇನೆ’ ಎಂದು 266ನೇ ಪೋಪ್‌ ಆಗಿ ಆಯ್ಕೆಯಾದ ಮೂರು ದಿನಗಳ ಬಳಿಕ ಅವರು ಹೇಳಿದ್ದರು. ಐಷಾರಾಮಿ ಜೀವನ ಸಾಗಿಸುವ ಅವಕಾಶವಿದ್ದರೂ ಅದನ್ನೆಲ್ಲ ತ್ಯಜಿಸಿ ಸರಳ ಬದುಕಿನ ಮಾರ್ಗ ಹಿಡಿದರು. ವಿಧವೆಯರು, ಅತ್ಯಾಚಾರ ಸಂತ್ರಸ್ತರು ಮತ್ತು ಕೈದಿಗಳ ಜತೆ ದೂರವಾಣಿ ಕರೆಮಾಡಿ ಮಾತನಾಡುತ್ತಿದ್ದರು.

ಪೋಪ್‌ ಆಗಿ ಆಯ್ಕೆಯಾಗಿ ವ್ಯಾಟಿಕನ್‌ನಲ್ಲಿ ತಮ್ಮ ಮೊದಲ ಈಸ್ಟರ್ ಆಚರಿಸುವ ಮುನ್ನ ಅವರು ರೋಮ್‌ನ ಜೈಲಿನಲ್ಲಿ ಕೈದಿಗಳ ಪಾದಗಳನ್ನು ತೊಳೆದು ಚುಂಬಿಸಿದ್ದರು. ಈ ಹಿಂದಿನ ಪೋಪ್‌ಗಳಿಗಿಂತ ತಾನು ಭಿನ್ನ ಹಾದಿಯಲ್ಲಿ ಸಾಗುತ್ತಿದ್ದೇನೆ ಎಂಬುದನ್ನು ಆರಂಭದಲ್ಲೇ ತೋರಿಸಿ, ಜಾಗತಿಕ ಮೆಚ್ಚುಗೆಯನ್ನು ಗಳಿಸಿದ್ದರು.

ತಮ್ಮ ಮೊದಲ ವಿದೇಶ ಪ್ರವಾಸಕ್ಕಾಗಿ ಫ್ರಾನ್ಸಿಸ್ ಅವರು ಇಟಲಿಯ ದ್ವೀಪ ಲಾಂಪೆಡೂಸಾವನ್ನು ಆಯ್ಕೆಮಾಡಿಕೊಂಡರು. ಏಕೆಂದರೆ, ವಲಸಿಗರು ಇದೇ ದ್ವೀಪದ ಮೂಲಕ ಯುರೋಪ್‌ ಪ್ರವೇಶಿಸುತ್ತಿದ್ದರು. 2016ರಲ್ಲಿ ಯುರೋಪ್‌ನಲ್ಲಿ ವಲಸೆ ಬಿಕ್ಕಟ್ಟು ತಲೆದೋರಿದ್ದಾಗ ಗ್ರೀಕ್ ದ್ವೀಪವಾದ ಲೆಸ್ಬೋಸ್‌ಗೆ ಭೇಟಿ ನೀಡಿದ್ದ ಅವರು ಆಶ್ರಯ ಕೋರಿ ಅಲ್ಲಿಗೆ ಬಂದಿದ್ದ ಸಿರಿಯಾದ ಮೂರು ಮುಸ್ಲಿಂ ಕುಟುಂಬಗಳೊಂದಿಗೆ ರೋಮ್‌ಗೆ ವಾಪಸಾಗಿದ್ದರು.

ಫುಟ್‌ಬಾಲ್‌ ಪ್ರೇಮಿ

lಫುಟ್‌ಬಾಲ್‌ ಪ್ರೇಮಿಯಾಗಿದ್ದ ಫ್ರಾನ್ಸಿಸ್‌ ಅವರು ಚಿಕ್ಕಂದಿನಲ್ಲಿ ತಂದೆಯ ಜತೆ ಫುಟ್‌ಬಾಲ್‌ ಪಂದ್ಯಗಳನ್ನು ನೋಡಲು ಹೋಗುತ್ತಿದ್ದರು 

lಡೊನಾಲ್ಡ್‌ ಟ್ರಂಪ್ ಆಡಳಿತವು ವಲಸಿಗರನ್ನು ಗಡೀಪಾರು ಮಾಡುತ್ತಿರುವುದನ್ನು, ‘ದೊಡ್ಡ ಬಿಕ್ಕಟ್ಟು’ ಎಂದು ಖಂಡಿಸಿದ್ದರು

lಪಾದ್ರಿಗಳಿಂದ ನಡೆಯುವ ಲೈಂಗಿಕ ದೌರ್ಜನ್ಯದಂತಹ ವಿಷಯಗಳ ಬಗ್ಗೆಯೂ ಮಾತನಾಡಿದ್ದ ಅವರು ಹಲವು ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ

ಹಲವರ ವಿರೋಧ ಕಟ್ಟಿಕೊಂಡಿದ್ದರು...

ಪೋಪ್‌ ಫ್ರಾನ್ಸಿಸ್‌ ಅವರು ಕ್ಯಾಥೊಲಿಕ್‌ ಬೋಧನೆಯ ತತ್ವಗಳನ್ನು ಅತ್ಯಂತ ಅಪಾಯಕಾರಿ ರೀತಿಯಲ್ಲಿ ತಿದ್ದಿದ್ದಾರೆಂದು ಅವರ ಟೀಕಾಕಾರರು ಆರೋಪಿಸಿದ್ದಾರೆ. 2017ರಲ್ಲಿ ನಾಲ್ವರು ಸಂಪ್ರದಾಯವಾದಿ ಕಾರ್ಡಿನಲ್‌ಗಳು ಪೋಪ್‌ ವಿರುದ್ಧ ಬಹಿರಂಗವಾಗಿ ಧ್ವನಿಯೆತ್ತಿದ್ದರಲ್ಲದೆ, ಅವರು ತಂದಿರುವ ಬದಲಾವಣೆಗಳು ಭಕ್ತರಲ್ಲಿ ಸೈದ್ಧಾಂತಿಕ ಗೊಂದಲವನ್ನು ಉಂಟುಮಾಡಿದೆ ಎಂದು ದೂರಿದ್ದರು.

ವಿಚ್ಛೇದಿತರು ಮತ್ತು ಮರುಮದುವೆಯಾದವರಿಗೆ ಹೋಲಿ ಕಮ್ಯೂನ್ಯನ್ (ಪರಮಪ್ರಸಾದ) ಸ್ವೀಕರಿಸಲು ಫ್ರಾನ್ಸಿಸ್‌ ಅವರು ಅವಕಾಶ ಮಾಡಿಕೊಟ್ಟಿದ್ದರು.

ನೈಟ್‌ಕ್ಲಬ್‌ನಲ್ಲಿ ಬೌನ್ಸರ್‌...

ಒರ್ಗೆ ಮಾರಿಯೊ ಬೆರ್ಗೊಲಿಯೊ (ಫ್ರಾನ್ಸಿಸ್‌) ಅವರು ಅರ್ಜೆಂಟೀನಾದ ಬ್ಯೂನಸ್‌ ಐರಿಸ್‌ನಲ್ಲಿ ಜನಿಸಿದರು. ಇಟಲಿಯಿಂದ ವಲಸೆ ಬಂದ ದಂಪತಿಯ ಐವರು ಮಕ್ಕಳಲ್ಲಿ ಅವರು ದೊಡ್ಡವರು. ಶಾಲಾ ದಿನಗಳಲ್ಲಿ ಮಧ್ಯಾಹ್ನದ ಬಳಿಕ ನೇಯ್ಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಯುವಕನಾಗಿದ್ದಾಗ ಕೆಲ ದಿನ ನೈಟ್‌ಕ್ಲಬ್‌ನಲ್ಲಿ ಬೌನ್ಸರ್‌ ಆಗಿಯೂ ಕೆಲಸ ಮಾಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.