ಪೋಪ್ ಫ್ರಾನ್ಸಿಸ್
–ರಾಯಿಟರ್ಸ್ ಚಿತ್ರ
ವ್ಯಾಟಿಕನ್ ಸಿಟಿ: ವಿನಮ್ರ ವ್ಯಕ್ತಿತ್ವ ಮತ್ತು ಬಡವರ ಬಗ್ಗೆ ಹೊಂದಿದ್ದ ಅಪಾರ ಕಾಳಜಿಯಿಂದ ಜಗತ್ತನ್ನೇ ಮೋಡಿ ಮಾಡಿದ್ದ ಪೋಪ್ ಫ್ರಾನ್ಸಿಸ್ (88) ಅವರು ಸೋಮವಾರ ನಿಧನರಾದರು.
ಪೋಪ್ ಹುದ್ದೆಗೇರಿದ ಲ್ಯಾಟಿನ್ ಅಮೆರಿಕದ ಮೊದಲ ಧರ್ಮಗುರು ಎನಿಸಿರುವ ಅವರು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಸ್ಥಳೀಯ ಕಾಲಮಾನ ಸೋಮವಾರ ಬೆಳಿಗ್ಗೆ 7.35ಕ್ಕೆ ಅವರು ನಿಧನರಾದರು ಎಂದು ವ್ಯಾಟಿಕನ್‌ನ ಪ್ರಕಟಣೆ ತಿಳಿಸಿದೆ. ನಿಧನದ ಸುದ್ದಿ ಘೋಷಣೆ ಆಗುತ್ತಿದ್ದಂತೆಯೇ ರೋಮ್‌ನಾದ್ಯಂತ ಚರ್ಚ್‌ಗಳಲ್ಲಿ ಗಂಟೆಯ ನಾದ ಮೊಳಗಿತು.
‘ಫ್ರಾನ್ಸಿಸ್ ಅವರ ಇಡೀ ಜೀವನವು ಚರ್ಚ್ ಮತ್ತು ಭಗವಂತನ ಸೇವೆಗೆ ಮೀಸಲಾಗಿತ್ತು’ ಎಂದು ಅವರ ನಿಧನ ಸುದ್ದಿ ಪ್ರಕಟಿಸಿದ ಹಿರಿಯ ಕಾರ್ಡಿನಲ್ ಕೆವಿನ್ ಫೆರೆಲ್ ಹೇಳಿದ್ದಾರೆ. ತಮ್ಮ ಆಡಳಿತದ ಅವಧಿಯಲ್ಲಿ ಕೆಲವೊಂದು ಸುಧಾರಣೆಗಳನ್ನು ತಂದಿದ್ದ ಫ್ರಾನ್ಸಿಸ್, ಸಂಪ್ರದಾಯವಾದಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು.
ಅರ್ಜೆಂಟೀನಾದ ಜಾರ್ಜ್ ಮಾರಿಯೊ ಬೆರ್ಗೊಲಿಯೊ (ಫ್ರಾನ್ಸಿಸ್ ಮೂಲ ಹೆಸರು) ಅವರು 2013ರ ಮಾರ್ಚ್ 13ರಂದು ಪೋಪ್ ಆಗಿ ಆಯ್ಕೆಯಾಗಿದ್ದರು. ಈಚೆಗೆ ನ್ಯುಮೋನಿಯದಿಂದ ಬಳಲಿದ್ದ ಅವರು ಫೆ.14ರಂದು ರೋಮ್‌ನ ಜೆಮೆಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. 38 ದಿನ ಚಿಕಿತ್ಸೆ ಪಡೆದು ಮಾರ್ಚ್ 23ರಂದು ಮನೆಗೆ ಮರಳಿದ್ದರು. ನ್ಯುಮೋನಿಯ ಕಾರಣ 1950ರ ಸಂದರ್ಭದಲ್ಲಿ ಅವರ ಬಲ ಶ್ವಾಸಕೋಶದ ಒಂದು ಭಾಗವನ್ನು ತೆಗೆದು ಹಾಕಲಾಗಿತ್ತು.
ಭಾನುವಾರ ವ್ಯಾಟಿಕನ್‌ನಲ್ಲಿ ಈಸ್ಟರ್ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಅವರು ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ನೆರೆದಿದ್ದ ಸಾವಿರಾರು ಮಂದಿಯನ್ನು ಆಶೀರ್ವದಿಸಿದ್ದರು. ಅದರ ಮರುದಿನ ಸಾವು ಸಂಭವಿಸಿದೆ.
ಇನ್ನೊಂದು ವಾರ ಫ್ರಾನ್ಸಿಸ್ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮೊದಲು ಸಾಂಟಾ ಮಾರ್ಟಾ ಚರ್ಚ್‌ನಲ್ಲಿ ವ್ಯಾಟಿಕನ್‌ನ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಲಿದ್ದಾರೆ. ಆ ಬಳಿಕ ಸೇಂಟ್ ಪೀಟರ್ಸ್‌ನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಅನಂತರ ಅಂತ್ಯಕ್ರಿಯೆ ಹಾಗೂ ನೂತನ ಪೋಪ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಹೊಸ ಪೋಪ್ ಆಯ್ಕೆಯಾಗುವವರೆಗೂ ಡಬ್ಲಿನ್ ಮೂಲದ ಕೆವಿನ್ ಫೆರೆಲ್ ಅವರು ವ್ಯಾಟಿಕನ್ ಸಿಟಿಯ ದೈನಂದಿನ ಚಟುವಟಿಕೆಗಳ ನೇತೃತ್ವ ವಹಿಸಲಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ವ್ಯಾಟಿಕನ್‌ನ ಆಡಳಿತದಲ್ಲಿ ಪಾರದರ್ಶಕತೆ ತಂದರಲ್ಲದೆ, ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.