ADVERTISEMENT

ಯುದ್ಧ ಕೊನೆಗೊಳ್ಳಲಿ, ಶಾಂತಿ ಮೂಡಲಿ: ಪೋಪ್‌ ಲಿಯೊ– 14 ಕ್ರಿಸ್‌ಮಸ್ ಸಂದೇಶ

ಏಜೆನ್ಸೀಸ್
Published 25 ಡಿಸೆಂಬರ್ 2025, 14:00 IST
Last Updated 25 ಡಿಸೆಂಬರ್ 2025, 14:00 IST
<div class="paragraphs"><p>ಪೋಪ್‌ ಲಿಯೊ– 14</p></div>

ಪೋಪ್‌ ಲಿಯೊ– 14

   

ಕೃಪೆ: X / @Pontifex

ವ್ಯಾಟಿಕನ್ ಸಿಟಿ: ಪೋಪ್‌ ಲಿಯೊ– 14 ಅವರು ತಮ್ಮ ಮೊದಲ ಕ್ರಿಸ್‌ಮಸ್ ಸಂದೇಶವನ್ನು ಗುರುವಾರ ನೀಡಿದರು. ಯುದ್ಧ ಎನ್ನುವುದು ‘ಅರ್ಥಹೀನವಾಗಿರುವುದು’ ಮತ್ತು ಅದು ಬಿಟ್ಟುಹೋಗಿರುವ ‘ಗಾಯ’ಗಳ ಬಗ್ಗೆ ಪ್ರಸ್ತಾಪಿಸಿ, ಖಂಡಿಸಿದರು.

ADVERTISEMENT

ಉಕ್ರೇನ್‌ ಮತ್ತು ಗಾಜಾದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಸಂಘರ್ಷಗಳು ಕೊನೆಗೊಂಡು ಶಾಂತಿ ನೆಲೆಸಲಿ ಎಂಬ ಆಶಯ ವ್ಯಕ್ತಪಡಿಸಿದರು.

ಇಸ್ರೇಲ್‌ ಆಕ್ರಮಿತ ವೆಸ್ಟ್‌ಬ್ಯಾಂಕ್‌ನ ಬೆತ್ಲೆಹೇಮ್‌ನಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲದ ನಂತರ ಕ್ರೈಸ್ತ ಸಮುದಾಯವು ತನ್ನ ಮೊದಲ ಹಬ್ಬದ ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಿತು.

ಹಿಂದಿನ ಪೋಪ್‌ ಫ್ರಾನ್ಸಿಸ್‌ ಅವರ ನಿಧನದ ನಂತರ ಮೇ ತಿಂಗಳಲ್ಲಿ ಆಯ್ಕೆಯಾದ ಪೋಪ್‌ ಲಿಯೊ ಅವರು, ಸೇಂಟ್‌ ಪೀಟರ್ಸ್‌ ಬೆಸಿಲಿಕಾದಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಗಾಜಾದ ಬಗ್ಗೆ ಮಾತನಾಡುತ್ತಾ, ‘ವಾರಗಟ್ಟಲೆ ಮಳೆ, ಗಾಳಿ ಮತ್ತು ಚಳಿಗೆ ಒಡ್ಡಿಕೊಂಡಿರುವ ಗಾಜಾದಲ್ಲಿನ ಡೇರೆಗಳ ಬಗ್ಗೆ ನಾವು ಹೇಗೆ ತಾನೇ ಯೋಚಿಸದಿರಲು ಸಾಧ್ಯ?’ ಎಂದು ಹೇಳಿದರು.

‍‍‘ಯುದ್ಧಗಳಿಂದ ಪೀಡಿತರಾದ ಅಸಹಾಯಕ ಜನರ ಬದುಕು ಅತ್ಯಂತ ದುರ್ಬಲವಾಗಿದೆ. ಈ ಯುದ್ಧಗಳು ಅವಶೇಷಗಳು ಮತ್ತು ಮಾಸದ ಗಾಯಗಳನ್ನು ಮಾತ್ರ ಉಳಿಸಿವೆ’ ಎಂದರು.

‘ಇತ್ತೀಚಿನ ದಿನಗಳಲ್ಲಿ ಗಾಜಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಯುದ್ಧದ ಸಮಯದಲ್ಲಿ ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯನ್‌ ಪ್ರದೇಶದ ನಿವಾಸಿಗಳ ಕಠಿಣ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ’ ಎಂದು ಹೇಳಿದರು.

ಬೆತ್ಲೆಹೆಮ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮ

ವೆಸ್ಟ್‌ಬ್ಯಾಂಕ್‌ನ ಬೆತ್ಲೆಹೆಮ್‌ನಲ್ಲಿ ಬುಧವಾರ ರಾತ್ರಿ ಕ್ರಿಸ್‌ಮಸ್‌ ಸಂಭ್ರಮ ಮನೆಮಾಡಿತ್ತು. ಬೆತ್ಲೆಹೆಮ್‌ನ ನೇಟಿವಿಟಿ ಚರ್ಚ್‌ನಲ್ಲಿ ನೂರಾರು ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. 2023ರ ಅಕ್ಟೋಬರ್‌ನಲ್ಲಿ ಇಸ್ರೇಲ್‌ ಮೇಲೆ ಹಮಾಸ್‌ ನಡೆಸಿದ್ದ ದಾಳಿಯೊಂದಿಗೆ ಪ್ರಾರಂಭವಾದ ಸಂಘರ್ಷವು ಯೇಸುಕ್ರಿಸ್ತನ ಜನ್ಮಸ್ಥಳವಾದ ಬೆತ್ಲೆಹೆಮ್‌ನಲ್ಲಿ ಕ್ರಿಸ್‌ಮಸ್ ಹಬ್ಬಕ್ಕೆ ಕತ್ತಲೆ ಕವಿದಿತ್ತು.

ಆದರೆ ಬುಧವಾರ ವೆಸ್ಟ್‌ಬ್ಯಾಂಕ್‌ ನಗರದಲ್ಲಿ ಮೆರವಣಿಗೆಗಳು ಮತ್ತು ಸಂಗೀತ ಕಾರ್ಯಕ್ರಮಗಳ ಮೂಲಕ ಸಡಗರ ಮರುಳಿಸಿತ್ತು. ಸ್ಟಾರ್‌ ಸ್ಟ್ರೀಟ್‌ನಲ್ಲಿ ನಡೆದ ಮೆರವಣಿಗೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು.

ರಾತ್ರಿ 11.15ಕ್ಕೆ ಸಂಗೀತದ ನಾದ ಮೊಳಗುತ್ತಿದ್ದಂತೆ ಪಾದ್ರಿಗಳ ಮೆರವಣಿಗೆ ಸಾಗಿಬಂತು. ಅವರ ಹಿಂದೆ ಜೆರುಸಲೆಮ್‌ನ ‘ಲ್ಯಾಟಿನ್ ಪ್ಯಾಟ್ರಿಯಾರ್ಕ್‌’ ಆಗಿರುವ ಕಾರ್ಡಿನಲ್‌ ಪಿಯರ್‌ಬಟಿಸ್ಟಾ ಪಿಜ್ಜಾಬಲ್ಲಾ ಅವರು ಆಗಮಿಸಿ ನೆರೆದಿದ್ದ ಜನಸಮೂಹಕ್ಕೆ ಶಿಲುಬೆಯಿಂದ ಆಶೀರ್ವದಿಸಿದರು.

ಸಿರಿಯಾದಲ್ಲೂ ಆಚರಣೆ

ಜೂನ್‌ ತಿಂಗಳಿನಲ್ಲಿ ನಡೆದಿದ್ದ ಭೀಕರ ದಾಳಿಯ ನಂತರ ಕ್ರೈಸ್ತ ಸಮುದಾಯದಲ್ಲಿ ಹಿಂಸಾಚಾರದ ಭೀತಿ ಇದ್ದಾಗ್ಯೂ ಸಿರಿಯಾದ ಡಮಾಸ್ಕಸ್‌ನ ಹಳೆಯ ನಗರದಲ್ಲಿ ಕ್ರಿಸ್‌ಮಸ್ ಹಬ್ಬದ ಸಡಗರ ಮನೆಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.