ದಿ ಹೇಗ್ : ಗಾಜಾ ಮೇಲಿನ ಇಸ್ರೇಲ್ ದಾಳಿಯ ಪರಿಣಾಮ ಎರಡೂ ಕೈಗಳನ್ನು ಕಳೆದುಕೊಂಡ ಪ್ಯಾಲೆಸ್ಟೀನ್ ಬಾಲಕನ ಚಿತ್ರವು 2025ನೇ ಸಾಲಿನ ‘ವಿಶ್ವದ ವಾರ್ಷಿಕ ಚಿತ್ರ’ ಎಂಬ ಗೌರವಕ್ಕೆ ಪಾತ್ರವಾಗಿದೆ.
ಕತಾರ್‌ನಲ್ಲಿ ನೆಲೆಯೂರಿದ ಪ್ಯಾಲೆಸ್ಟೀನ್ ಮೂಲದ ಛಾಯಾಗ್ರಾಹಕಿ ಸಮರ್ ಅಬು ಎಲೌಫ್ ಅವರು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಗಾಗಿ ತೆಗೆದ ಈ ಚಿತ್ರದಲ್ಲಿ 9 ವರ್ಷದ ಮಹಮ್ಮದ್ ಅಜ್ಜೌರ್ ಅವರು ಬನಿಯನ್ ಮೇಲಿದ್ದು, ಎರಡೂ ಕೈಗಳು ಇಲ್ಲದಿರುವುದು ಕಂಡುಬರುತ್ತದೆ.
ತನಗೆ ಎರಡೂ ಕೈಗಳು ಇಲ್ಲ ಎಂಬುದನ್ನು ತಿಳಿದ ಬಾಲಕ, ‘ಅಮ್ಮ ನಿನ್ನನ್ನು ನಾನು ಹೇಗೆ ಅಪ್ಪಿಕೊಳ್ಳಲಿ’ ಎಂದು ತನ್ನ ತಾಯಿಯನ್ನು ಪ್ರಶ್ನಿಸಿದ್ದ. ಈ ವಿಚಾರವನ್ನು ಖುದ್ದು ಅವರ ತಾಯಿಯೇ ತನ್ನ ಬಳಿ ಹೇಳಿದ್ದರು ಎಂದು ಛಾಯಾಗ್ರಾಹಕಿ ಅಬು ಎಲೌಫ್ ಹೇಳಿದ್ದಾರೆ.
68ನೇ ಸಾಲಿನ ಪ್ರತಿಷ್ಠಿತ ಛಾಯಾಚಿತ್ರ ಪತ್ರಿಕೋದ್ಯಮ ಪ್ರಶಸ್ತಿಗಾಗಿ 141 ರಾಷ್ಟ್ರಗಳ 3778 ಛಾಯಾಗ್ರಾಹಕರು ಒಟ್ಟಾರೆ 59,320 ಚಿತ್ರಗಳನ್ನು ಕಳುಹಿಸಿದ್ದರು. ಅವುಗಳಲ್ಲಿ ಈ ಚಿತ್ರ ಮಾತ್ರ ಹೆಚ್ಚು ಗಟ್ಟಿಯಾಗಿ ಮಾತನಾಡುವಂತಿತ್ತು. ಇದು ಒಬ್ಬ ಬಾಲಕನ ಕಥೆಯನ್ನು ಹೇಳುತ್ತಿತ್ತು. ಅಷ್ಟೇ ಅಲ್ಲದೆ, ಯುದ್ಧವು ತಲೆಮಾರುಗಳ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಸಿತು ಎಂದು ವಿಶ್ವ ಪ್ರೆಸ್ ಫೋಟೊದ ಕಾರ್ಯ ನಿರ್ವಾಹಕ ನಿರ್ದೇಶಕಿ ಜೌಮನ ಎಲ್ ಝೀನ್ ಖೌರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.