ADVERTISEMENT

ಮಧ್ಯ ಏಷ್ಯಾದ ಕಜಕಿಸ್ತಾನ, ಉಜ್ಬೇಕಿಸ್ತಾನ, ಕಿರ್ಗಿಸ್ತಾನ ಕತ್ತಲಲ್ಲಿ!

ಏಜೆನ್ಸೀಸ್
Published 25 ಜನವರಿ 2022, 10:12 IST
Last Updated 25 ಜನವರಿ 2022, 10:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮಾಸ್ಕೋ (ರಷ್ಯಾ): ಮಧ್ಯ ಏಷ್ಯಾ ರಾಷ್ಟ್ರಗಳಾದ ಕಜಖಸ್ತಾನ, ಉಜ್ಬೇಕಿಸ್ತಾನ ಮತ್ತು ಕಿರ್ಗಿಸ್ತಾನಗಳಲ್ಲಿ ಮಂಗಳವಾರ ವ್ಯಾಪಕ ವಿದ್ಯುತ್ ಕಡಿತ ಉಂಟಾಗಿದೆ.

ಕಜಖಸ್ತಾನದ ಅತಿದೊಡ್ಡ ನಗರ ಅಲ್ಮಾಟಿ ವಿದ್ಯುತ್‌ ಇಲ್ಲದೇ ಸ್ತಬ್ಧವಾಗಿದೆ ಎಂದು ಸುದ್ದಿ ಸಂಸ್ಥೆ ‘ಇಂಟರ್‌ಫ್ಯಾಕ್ಸ್’ ಹೇಳಿದೆ. ತುರ್ಕಿಸ್ತಾನದ ದಕ್ಷಿಣ ಪ್ರದೇಶದಲ್ಲಿ, ವಿಶೇಷವಾಗಿ ಶೈಮ್ಕೆಂಟ್ ನಗರದಲ್ಲಿ ಮತ್ತು ನೆರೆಯ ಜಂಬಿಲ್ ಪ್ರದೇಶದ ತರಾಜ್ ನಗರದಲ್ಲಿಯೂ ವಿದ್ಯುತ್‌ ಇಲ್ಲವಾಗಿದೆ ಎಂದು ಕಝಕ್ ಸುದ್ದಿ ಮಾಧ್ಯಮ ‘ಒರ್ಡಾ.ಕೆಝಡ್‌’ ವರದಿ ಮಾಡಿದೆ.
ಕಿರ್ಗಿಸ್ತಾನದ ರಾಜಧಾನಿ ಬಿಶ್ಕೆಕ್ ಮತ್ತು ಉತ್ತರ ಚುಯ್ ಪ್ರದೇಶದಲ್ಲಿ ವಿದ್ಯುತ್‌ ಇಲ್ಲದೇ ಕತ್ತಲು ಆವರಿಸಿದೆ ಎಂದು ದೇಶದ ಇಂಧನ ಸಚಿವಾಲಯ ಮತ್ತು ಸ್ಥಳೀಯ ವಿದ್ಯುತ್ ಪೂರೈಕೆದಾರ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ‘ಇಂಟರ್‌ಫ್ಯಾಕ್ಸ್’ ವರದಿ ಮಾಡಿದೆ.

ಉಜ್ಬೇಕಿಸ್ತಾನ್‌ನದಲ್ಲಿಯೂ ವಿದ್ಯುತ್‌ ಇಲ್ಲವಾಗಿದೆ ಎಂದು ಅಲ್ಲಿನ ಇಂಧನ ಸಚಿವಾಲಯ ತಿಳಿಸಿದೆ. ಹೀಗಾಗಿ ರಾಜಧಾನಿ ತಾಷ್ಕೆಂಟ್‌ನಲ್ಲಿ ಸುರಂಗಮಾರ್ಗವನ್ನು ಸ್ಥಗಿತಗೊಳಿಸಲಾಗಿದೆ. ವಿದ್ಯುತ್‌ ಇಲ್ಲವಾಗಿರುವ ಕುರಿತು ಪೊಲೀಸರು ಜನರಿಗೆ ಎಚ್ಚರಿಕೆಗಳನ್ನೂ ನೀಡುತ್ತಿದ್ದಾರೆ.

ADVERTISEMENT

ತಾಷ್ಕೆಂಟ್ ವಿಮಾನ ನಿಲ್ದಾಣಕ್ಕೆ ವಿಮಾನಗಳ ಆಗಮನವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಹೇಳಲಾಗಿದೆ.

ಈ ರಾಷ್ಟ್ರಗಳಲ್ಲಿ ವಿದ್ಯುತ್‌ ಸ್ತಬ್ಧಗೊಳ್ಳಲು ಕಾರಣವೇನು ಎಂಬುದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಕಜಖ್‌ಸ್ತಾನದಲ್ಲಿ ಉಂಟಾಗಿರುವ ವಿದ್ಯುತ್ ಲೇನ್‌ ವೈಫಲ್ಯವೇ ಸಮಸ್ಯೆಗೆ ಕಾರಣವೆಂದು ಉಜ್ಬೇಕಿಸ್ತಾನದ ಅಧಿಕಾರಿಗಳು ಆರೋಪಿಸಿದ್ದಾರೆ. ಈ ಮೂರು ರಾಷ್ಟ್ರಗಳು ಹಿಂದೊಮ್ಮೆ ‌ಸೋವಿಯತ್‌ ಒಕ್ಕೂಟದ ಭಾಗವಾಗಿದ್ದವು. ಆಗ ಮೂರು ರಾಷ್ಟ್ರಗಳಿಗೂ ಒಂದೇ ವಿದ್ಯುತ್‌ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.