ADVERTISEMENT

ಶ್ರೀಲಂಕಾ: ಪಾಸ್‌ಪೋರ್ಟ್‌ಗಾಗಿ 2 ದಿನ ಕ್ಯೂನಲ್ಲಿ– ಮಗುವಿಗೆ ಜನ್ಮ ನೀಡಿದ ಮಹಿಳೆ

ಪಿಟಿಐ
Published 7 ಜುಲೈ 2022, 10:21 IST
Last Updated 7 ಜುಲೈ 2022, 10:21 IST
   

ಕೊಲಂಬೊ: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಜನರ ಪರಿಸ್ಥಿತಿ ಹೇಳತೀರದಾಗಿದೆ. ಸಂಕಷ್ಟದಲ್ಲಿರುವ ದ್ವೀಪ ರಾಷ್ಟ್ರ ಬಿಟ್ಟು ಉದ್ಯೋಗಕ್ಕಾಗಿ ಬೇರೆ ದೇಶಕ್ಕೆ ತೆರಳಲು ಪಾಸ್‌ಪೋರ್ಟ್‌ಗಾಗಿ ಎರಡು ದಿನಗಳಿಂದ ಸರತಿ ಸಾಲಿನಲ್ಲಿ ನಿಂತಿದ್ದ ತುಂಬು ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡು ಬಳಿಕ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.

ವಲಸೆ ಇಲಾಖೆಯ ಕೇಂದ್ರದ ಬಳಿ ಇದ್ದ ಸೇನಾ ಸಿಬ್ಬಂದಿ, 26 ವರ್ಷದ ಮಹಿಳೆಯು ಹೆರಿಗೆ ನೋವಿನಿಂದ ಕಷ್ಟಪಡುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ, ಅವರನ್ನು ಸಮೀಪದ ಕ್ಯಾಸ್ಟಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಮಹಿಳೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಂಟ್ರಲ್ ಹಿಲ್ಸ್ ಪ್ರದೇಶದ ಮಹಿಳೆಯು ಬೇರೆ ದೇಶದಲ್ಲಿ ಉದ್ಯೋಗಕ್ಕೆ ಸೇರಲು ಪಾಸ್‌ಪೋರ್ಟ್ ಪಡೆಯಲು ಎರಡು ದಿನಗಳಿಂದ ಪತಿ ಜೊತೆ ಕ್ಯೂನಲ್ಲಿ ನಿಂತಿದ್ದರು.

ADVERTISEMENT

ಜನವರಿಯಿಂದ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಂಡಿದ್ದು, ಹಲವಾರು ಜನರು ಪಾಸ್‌ಪೋರ್ಟ್ ಪಡೆದು ವಿದೇಶಗಳಿಗೆ ತೆರಳಲು ಮುಗಿಬಿದ್ದಿದ್ದಾರೆ.

ಇಂದು ಬೆಳಿಗ್ಗೆ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಅಸುನೀಗಿದ್ದಾನೆ. ಮಾರ್ಚ್ ತಿಂಗಳಲ್ಲಿ ಈ ರೀತಿಯ 16 ಘಟನೆಗಳು ನಡೆದಿವೆ.

ಮೂರು ಚಕ್ರದ ವಾಹನದಲ್ಲಿ ಬಂದಿದ್ದ 60 ವರ್ಷದ ಐಸ್ ಕ್ರೀಮ್ ವ್ಯಾಪಾರಿಯೊಬ್ಬರು 3 ದಿನಗಳಿಂದ ಪಯಗಾಲಾ ದಕ್ಷಿಣದ ಬಂಕ್ ಬಳಿ ಪೆಟ್ರೋಲ್ ಹಾಕಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು. ಈ ಸಂದರ್ಭ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕರೆತರುವಾಗಲೇ ವ್ಯಕ್ತಿ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ದೃಢಪಡಿಸಿದ್ದಾರೆ.

1948ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಅತ್ಯಂತ ಭೀಕರ ಎನ್ನಲಾದ ಆರ್ಥಿಕ ದುಸ್ಥಿತಿಗೆ ಲಂಕಾ ತುತ್ತಾಗಿದೆ. ವಿದೇಶಿ ಕರೆನ್ಸಿ ಕೊರತೆಯಿಂದ ತೈಲ, ಆಹಾರ ಪದಾರ್ಥ, ವೈದ್ಯಕೀಯ ಸಾಮಗ್ರಿ ಖರೀದಿಗೂ ಹಣದ ಕೊರತೆ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.