ADVERTISEMENT

ಅಮೆರಿಕದ ಎಲ್ಲ ವಯಸ್ಕರಿಗೆ ಏಪ್ರಿಲ್‌ 19ರೊಳಗೆ ಕೊರೊನಾ ಲಸಿಕೆ: ಜೋ ಬೈಡನ್

ವಯಸ್ಕರಲ್ಲಿ ಹೆಚ್ಚುತ್ತಿರುವ ಸೋಂಕು:

ಪಿಟಿಐ
Published 7 ಏಪ್ರಿಲ್ 2021, 8:19 IST
Last Updated 7 ಏಪ್ರಿಲ್ 2021, 8:19 IST
ಜೋ ಬೈಡನ್
ಜೋ ಬೈಡನ್   

ವಾಷಿಂಗ್ಟನ್: ಅಮೆರಿಕದ ಪ್ರತಿಯೊಬ್ಬ ವಯಸ್ಕ ನಾಗರಿಕನಿಗೂ ಈ ತಿಂಗಳ 19ರೊಳಗೆ ಕೊರೊನಾ ಸೋಂಕಿನ ವಿರುದ್ಧದ ಲಸಿಕೆ ನೀಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಕಟಿಸಿದ್ದಾರೆ.

ಈ ಹಿಂದೆ ವಯಸ್ಕರಿಗೆ ಲಸಿಕೆ ಪಡೆಯುವುದಕ್ಕೆ ಮೇ 1ರ ಗಡುವು ನಿಗದಿಪಡಿಸಲಾಗಿತ್ತು. ಆದರೆ, ಅಮೆರಿಕದ ವಯಸ್ಕರಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಕಾರಣ, ಹಿಂದೆ ನೀಡಿದ್ದ ಗಡುವನ್ನು ಎರಡು ವಾರ ಕಡಿತಗೊಳಿಸಿ, ಏ. 19ಕ್ಕೆ ಹೊಸ ಗಡುವು ನೀಡಲಾಗಿದೆ.

‌ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿನಿಂದ ಹಾನಿಗೊಳಗಾದ ಅಮೆರಿಕದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ನಾಲ್ಕನೇ ಹಂತ ತಲುಪಿವೆ. ಇದರ ನಡುವೆಯೇ ಮಂಗಳವಾರ ಅಧ್ಯಕ್ಷ ಬೈಡನ್ ಅವರು ಈ ಪ್ರಕಟಣೆ ಹೊರಡಿಸಿದ್ದಾರೆ.

ADVERTISEMENT

ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಅಮೆರಿಕ ಈಗಲೂ ಜೀವನ್ಮರಣದ ಹೋರಾಟಲ್ಲಿದೆ. ಇಂಥ ಪರಿಸ್ಥಿತಿಯಲ್ಲಿ ಜೋ ಬೈಡನ್ ಆಡಳಿತ, 75 ದಿನಗಳಲ್ಲಿ 150 ದಶಲಕ್ಷ ಡೋಸೇಜ್‌ ಲಸಿಕೆ ಪೂರೈಸಿದೆ. ಈಗ 100 ದಿನಗಳಲ್ಲಿ 1 ಕೋಟಿ ಡೋಸೇಜ್‌ ಲಸಿಕೆ ಹಾಕುವ ಮೂಲಕ ಅಮೆರಿಕ ಹೊಸ ದಾಖಲೆ ಬರೆದಿದೆ. ಮುಂದೆ 100 ದಿನಗಳಲ್ಲಿ ದೇಶದ 2 ಕೋಟಿ ಜನರಿಗೆ ಲಸಿಕೆ ಹಾಕುವಂತಹ ಗುರಿ ಹೊಂದಿದೆ.

ವಾಷಿಂಗ್ಟನ್‌ನ ವರ್ಜೀನಿಯಾ ಉಪ ನಗರದ ಲಸಿಕಾ ಕೇಂದ್ರದಲ್ಲಿ ಮಾತನಾಡಿದ ಬೈಡನ್, ‘ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ನಾವಿನ್ನೂ ಅಂತಿಮ ಹಂತ ತಲುಪಿಲ್ಲ. ಈ ಹೋರಾಟದಲ್ಲಿ ಇನ್ನೂ ಬಹಳಷ್ಟು ದೂರ ಕ್ರಮಿಸಬೇಕಿದೆ‘ ಎಂದು ಎಚ್ಚರಿಸಿದ್ದಾರೆ.

‘ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವ ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ‘ ಎಂದು ಬೈಡನ್ ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.