ADVERTISEMENT

ಅಮೆರಿಕ: ಎಚ್‌–1ಬಿ ಸೇರಿ ವಿವಿಧ ವೀಸಾ ಮೇಲಿನ ನಿಷೇಧ ತೆರವಿಗೆ ಆಗ್ರಹ

ಪಿಟಿಐ
Published 19 ಮಾರ್ಚ್ 2021, 6:07 IST
Last Updated 19 ಮಾರ್ಚ್ 2021, 6:07 IST
ಎಚ್‌–1ಬಿ
ಎಚ್‌–1ಬಿ   

ವಾಷಿಂಗ್ಟನ್‌: ಎಚ್‌–1ಬಿ ಸೇರಿದಂತೆ ವೃತ್ತಿಪರರಿಗೆ ನೀಡುವವಿವಿಧ ವೀಸಾಗಳ ಮೇಲೆ ಡೊನಾಲ್ಡ್‌ ಟ್ರಂಪ್‌ ಆಡಳಿತದ ಅವಧಿಯಲ್ಲಿ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸುವಂತೆ ಡೆಮಾಕ್ರಟಿಕ್‌ ಪಕ್ಷದ ಐವರು ಪ್ರಭಾವಿ ಸೆನೆಟ್‌ ಸದಸ್ಯರು ಒತ್ತಾಯಿಸಿದ್ದಾರೆ.

ಈ ಸಂಬಂಧ ಸಂಸದರು ಅಧ್ಯಕ್ಷ ಜೋ ಬೈಡನ್‌ ಅವರಿಗೆ ಪತ್ರ ಬರೆದಿದ್ದು, ‘ವೀಸಾ ಮೇಲಿನ ನಿಷೇಧವನ್ನು ಮುಂದುವರಿಸಿದ್ದೇ ಆದಲ್ಲಿ ಅಮೆರಿಕದ ಕಂಪನಿಗಳು, ಈ ಕಂಪನಿಗಳ ಉದ್ಯೋಗಿಗಳು ಹಾಗೂ ಅವರ ಕುಟುಂಬಗಳು ಅನಿಶ್ಷಿತತೆಯಲ್ಲಿಯೇ ಇರಬೇಕಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸೆನೆಟ್‌ ಸದಸ್ಯರಾದ ಮೈಕಲ್‌ ಬೆನೆಟ್‌, ಜೀನ್‌ ಶಹೀನ್‌, ಆ್ಯಂಗಸ್‌ ಕಿಂಗ್‌, ಕಾರಿ ಬೂಕರ್‌ ಹಾಗೂ ಬಾಬ್‌ ಮೆನೆಂಡಜ್‌ ಪತ್ರ ಬರೆದಿದ್ದಾರೆ.

ADVERTISEMENT

‘ವೀಸಾ ಮೇಲಿನ ನಿಷೇಧವನ್ನು ತೆರವುಗೊಳಿಸದಿದ್ದರೆ, ವಲಸೆ ವ್ಯವಸ್ಥೆ ಮತ್ತಷ್ಟು ಜಟಿಲವಾಗುತ್ತದೆ. ವಿವಿಧ ದೇಶಗಳ ಪ್ರತಿಭಾವಂತರು ಅಮೆರಿಕ ಬದಲಾಗಿ ಬೇರೆ ರಾಷ್ಟ್ರಗಳತ್ತ ಮುಖ ಮಾಡುತ್ತಾರೆ’ ಎಂದೂ ಸಂಸದರು ವಿವರಿಸಿದ್ದಾರೆ.

ಕೋವಿಡ್‌ ಹಿನ್ನೆಲೆಯಲ್ಲಿ ಸ್ಥಳೀಯರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಹೀಗಾಗಿ ಬೇರೆ ಬೇರೆ ದೇಶಗಳಿಂದ ಐಟಿ ಸೇರಿದಂತೆ ವಿವಿಧ ವೃತ್ತಿಪರರು ಅಮೆರಿಕಕ್ಕೆ ಬರುವುದನ್ನು ತಡೆಯಲು ಡೊನಾಲ್ಡ್‌ ಟ್ರಂಪ್‌ ಅವರು ಅಧ್ಯಕ್ಷರಾಗಿದ್ದಾಗ ವಲಸೆಯೇತರ ವೀಸಾಗಳ ಮೇಲೆ ನಿಷೇಧ ಹೇರಿದ್ದರು.

ಕಳೆದ ವರ್ಷ ಜೂನ್‌ನಲ್ಲಿ ಎಚ್‌–1ಬಿ, ಎಲ್‌–1, ಎಚ್‌–2ಬಿ ಹಾಗೂ ಜೆ–1 ವೀಸಾಗಳ ಮೇಲೆ ನಿಷೇಧ ಹೇರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.