ಷಿ ಜಿನ್‌ಪಿಂಗ್
ಬೀಜಿಂಗ್: ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸುವ ಬಗ್ಗೆ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಅಧ್ಯಕ್ಷ ಷಿ ಜಿನ್‌ಪಿಂಗ್, ‘ತನ್ನ ಹಿತಾಸಕ್ತಿಗಳ ರಕ್ಷಣೆಗೆ ಚೀನಾ ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದು ಮಂಗಳವಾರ ತಿರುಗೇಟು ನೀಡಿದ್ದಾರೆ.
‘ವಿವಿಧ ಉತ್ಪನ್ನಗಳ ಮೇಲೆ ಅಧಿಕ ದರ ಆಕರಣೆ ಹಾಗೂ ತಂತ್ರಜ್ಞಾನ ಮೂಲಕ ನಡೆಸುವ ಯುದ್ಧಗಳು ಹಿಂದಿನಿಂದಲೂ ಅನುಸರಿಸಿಕೊಂಡು ಬರುತ್ತಿರುವ ವ್ಯಾಪಾರ ನೀತಿಗಳು ಹಾಗೂ ಆರ್ಥಿಕ ನಿಯಮಗಳಿಗೆ ವ್ಯತಿರಿಕ್ತವಾಗಲಿವೆ. ಇಂತಹ ಯುದ್ಧಗಳಲ್ಲಿ ಯಾರೂ ಗೆಲುವು ಸಾಧಿಸುವುದಿಲ್ಲ’ ಎಂದು ಷಿ ಜಿನ್‌ಪಿಂಗ್ ಹೇಳಿದ್ದಾರೆ.
ವಿಶ್ವಬ್ಯಾಂಕ್, ಐಎಂಎಫ್ ಹಾಗೂ ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯುಟಿಒ) ಸೇರಿ 10 ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಸಂಘಟನೆಗಳ ಮುಖ್ಯಸ್ಥರ ನಡೆದ ಸಭೆಯಲ್ಲಿ ಅವರು ಈ ಅಭಿಪ್ರಾಯ ಹೊರಹಾಕಿದ್ದಾರೆ.
‘ಇತರ ದೇಶಗಳೊಂದಿಗೆ ವ್ಯವಹರಿಸುವಾಗ ತನ್ನ ಸಾರ್ವಭೌಮತೆ, ಭದ್ರತೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಿಗೆ ಚೀನಾ ಹೆಚ್ಚು ಗಮನ ನೀಡುತ್ತದೆ. ತನ್ನ ಹಿತಾಸಕ್ತಿ ರಕ್ಷಣೆಗೆ ನಿರ್ಣಾಯಕ ಕ್ರಮ ಕೈಗೊಳ್ಳುತ್ತದೆ’ ಎಂಬುದಾಗಿ ಸಭೆಯಲ್ಲಿ ಷಿ ಜಿನ್‌ಪಿಂಗ್ ಹೇಳಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.