ADVERTISEMENT

ಇಟಲಿಗೆ ತೆರಳಲು ಪಾಕ್‌ ವಾಯಪ್ರದೇಶ ಬಳಸಿದ ಪ್ರಧಾನಿ: ವರದಿ

ಪಿಟಿಐ
Published 31 ಅಕ್ಟೋಬರ್ 2021, 10:43 IST
Last Updated 31 ಅಕ್ಟೋಬರ್ 2021, 10:43 IST
   

ಇಸ್ಲಾಮಾಬಾದ್‌: ಜಿ 20 ಶೃಂಗಸಭೆಗಾಗಿ ಇಟಲಿಗೆ ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ವಿವಿಐಪಿ ವಿಮಾನವು ಶುಕ್ರವಾರ ಪಾಕಿಸ್ತಾನ ವಾಯುಪ್ರದೇಶದ ಮೇಲೆ ಹಾದು ಹೋಗಿದೆ. ಇಟಲಿಯಿಂದ ಭಾರತಕ್ಕೆ ತೆರಳುವಾಗಲೂ ವಿಮಾನ ಅದೇ ಮಾರ್ಗವನ್ನೇ ಬಳಸಲಿದೆ. ಇದಕ್ಕಾಗಿ ಭಾರತ ಸರ್ಕಾರವು ಪಾಕಿಸ್ತಾನದಿಂದ ಔಪಚಾರಿಕ ಅನುಮತಿ ಪಡೆದಿದೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ಭಾನುವಾರ ವರದಿಯಾಗಿದೆ.

ಪ್ರಧಾನಿ ಮೋದಿಯವರಿದ್ದ ಬೋಯಿಂಗ್ 777, 300ಇಅರ್‌, ಕೆ7066 ವಿಮಾನವು ಬಹವಲ್‌ಪುರದ ಮೂಲಕ ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿತು. ಟರ್ಬತ್ ಮತ್ತು ಪಂಜ್‌ಗುರ್ ಮೂಲಕ ಹಾದು ಇರಾನ್ ಮತ್ತು ಟರ್ಕಿ ಮೂಲಕ ಇಟಲಿಯನ್ನು ತಲುಪಿತು ಎಂದು ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಪ್ರಕಟಿಸಿದಿದೆ.

ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎ)ದ ಮೂಲಗಳ ಪ್ರಕಾರ, ಮೋದಿ ಅವರ ವಿಶೇಷ ವಿಮಾನವು ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲು ಭಾರತೀಯ ಅಧಿಕಾರಿಗಳು ಪಾಕ್‌ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಬಳಿ ಅನುಮತಿ ಕೋರಿದ್ದರು ಎನ್ನಲಾಗಿದೆ.

ADVERTISEMENT

ಭಾರತದ ಮನವಿಯನ್ನು ಪಾಕಿಸ್ತಾನ ಒಪ್ಪಿದ್ದು, ಭಾರತದ ಪ್ರಧಾನಿ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ.

2019ರ ಆಗಸ್ಟ್‌ನಲ್ಲಿ ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದ ನಂತರ ಮತ್ತು ಅದನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ಹದಗೆಟ್ಟಿವೆ.

ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸಂಬಂಧ ಬಯಸುವುದಾಗಿ ಭಾರತ ಈಗಾಗಲೇ ತಿಳಿಸಿದೆ.

ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಶುಕ್ರವಾರ ಇಟಲಿಗೆ ಆಗಮಿಸಿದರು. ಕೋವಿಡ್‌ನಿಂದ ಜಾಗತಿಕ ಆರ್ಥಿಕ ಮತ್ತು ಆರೋಗ್ಯ ಚೇತರಿಕೆ, ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆಯ ಕುರಿತು ಚರ್ಚಿಸಲು ಇತರ ದೇಶಗಳ ನಾಯಕರೂ ಇಲ್ಲಿ ಸೇರಿದ್ದಾರೆ.

ಗ್ಲಾಸ್ಗೋದಲ್ಲಿ ಹವಾಮಾನ ಶೃಂಗಸಭೆಯ ನಂತರ ಭಾರತಕ್ಕೆ ಹಿಂದಿರುಗುವಾಗ ಮೋದಿ ಅವರ ವಿಮಾನವು ಮತ್ತೆ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸುತ್ತದೆ ಎಂದು ಸಿಎಎ ವಕ್ತಾರರು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಈ ಹಿಂದೆ ಭಾರತೀಯ ವಾಣಿಜ್ಯ ವಿಮಾನವೊಂದು ಅಗತ್ಯ ಅನುಮತಿ ಪಡೆದು ಪಾಕಿಸ್ತಾನದ ವಾಯುಪ್ರದೇಶ ಬಳಸಿತ್ತು ಎಂದು ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ವರದಿ ಮಾಡಿದೆ.

ಕಳೆದ ತಿಂಗಳು, ಮೋದಿ ಅವರು ಅಮೆರಿಕಕ್ಕೆ ತೆರಳುವಾಗಲೂ ಪಾಕಿಸ್ತಾನದ ವಾಯು ಪ್ರದೇಶವನ್ನು ಬಳಸಿದ್ದರು. ಇದಕ್ಕೂ ಅನುಮತಿ ಪಡೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.