ADVERTISEMENT

ಶ್ರೀಲಂಕಾ: ಸರ್ಕಾರಿ ಕಟ್ಟಡಗಳನ್ನು ಬಿಟ್ಟು ತೆರಳಲು ಒಪ್ಪಿದ ಪ್ರತಿಭಟನಾಕಾರರು

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 7:40 IST
Last Updated 14 ಜುಲೈ 2022, 7:40 IST
ಶ್ರೀಲಂಕಾ ಅಧ್ಯಕ್ಷರ ಕಚೇರಿಗೆ ನುಗ್ಗಿದ್ದ ಪ್ರತಿಭಟನಾಕಾರರು: ಎಎಫ್‌ಪಿ ಚಿತ್ರ
ಶ್ರೀಲಂಕಾ ಅಧ್ಯಕ್ಷರ ಕಚೇರಿಗೆ ನುಗ್ಗಿದ್ದ ಪ್ರತಿಭಟನಾಕಾರರು: ಎಎಫ್‌ಪಿ ಚಿತ್ರ   

ಕೊಲಂಬೊ: ಶ್ರೀಲಂಕಾದ ಪ್ರತಿಭಟನಾಕಾರರುಸರ್ಕಾರದ ಅಧಿಕೃತ ಕಟ್ಟಡಗಳನ್ನು ಶಾಂತಿಯುತವಾಗಿ ತೆರವು ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಆದರೆ,ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ಕಾಪಾಡುವಲ್ಲಿ ವಿಫಲವಾದ ಅಧ್ಯಕ್ಷ ಮತ್ತು ಪ್ರಧಾನ ಮಂತ್ರಿಯನ್ನು ಕೆಳಗಿಳಿಸಲು ತಮ್ಮ ಪ್ರಯತ್ನವನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಅಧ್ಯಕ್ಷ ಗೊಟಬಯ ರಾಜಪಕ್ಸ ಮನೆಗೆ ನುಗ್ಗಿದ್ದ ಪ್ರತಿಭಟನಾಕಾರರು ಅವರು ದೇಶ ಬಿಟ್ಟು ತೆರಳುವಂತೆ ಮಾಡಿದ್ದರು. ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕಚೇರಿಗೂ ದಾಳಿ ಮಾಡಿದ್ದರು.

ಬುಧವಾರ ರಾಜೀನಾಮೆ ನೀಡುವುದಾಗಿ ಹೇಳಿದ್ದ ಅಧ್ಯಕ್ಷ ಗೊಟಬಯ, ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಪ್ರಭಾರಿ ಅಧ್ಯಕ್ಷರಾಗಿ ನೇಮಕ ಮಾಡಿ ದೇಶ ತೊರೆದಿದ್ದಾರೆ. ಸದ್ಯ, ಮಾಲ್ಡೀವ್ಸ್‌ನಲ್ಲಿರುವ ಅವರು ಕುಟುಂಬದ ಜೊತೆ ಸಿಂಗಪುರಕ್ಕೆ ತೆರಳಲು ಖಾಸಗಿ ವಿಮಾನಕ್ಕಾಗಿ ಕಾಯುತ್ತಿದ್ದಾರೆ ಎಂಬ ವರದಿಗಳು ಬಂದಿವೆ. ಈ ಮಧ್ಯೆ, ಸರ್ಕಾರಿ ಕಟ್ಟಡಗಳನ್ನು ತೆರವು ಮಾಡುವಂತೆ ಆಗ್ರಹಿಸಿರುವ ಗೊಟಬಯ ರಾಜಪಕ್ಸ, ಪ್ರತಿಭಟನಾಕಾರರನ್ನು ತೆರವುಗೊಳಿಸಲು ಬೇಕಾದ ಕಾನೂನು ಕ್ರಮ ಜರುಗಿಸುವಂತೆ ಭದ್ರತಾ ಪಡೆಗೆ ಆದೇಶಿಸಿದ್ದಾರೆ.

ADVERTISEMENT

‘ನಾವು ಈ ಕೂಡಲೇ ಅಧ್ಯಕ್ಷರ ಅರಮನೆ, ಅಧ್ಯಕ್ಷರ ಕಚೇರಿಗಳು ಮತ್ತು ಪ್ರಧಾನ ಮಂತ್ರಿ ಕಚೇರಿಯನ್ನು ತೆರವುಗೊಳಿಸುತ್ತಿದ್ದೇವೆ. ನಮ್ಮ ಹೋರಾಟ ಮಾತ್ರ ಮುಂದುವರಿಯಲಿದೆ’ಎಂದು ಪ್ರತಿಭಟನಾಕಾರರ ವಕ್ತಾರರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

200 ವರ್ಷಗಳಷ್ಟು ಹಳೆಯದಾದ ಶ್ರೀಲಂಕಾ ಅಧ್ಯಕ್ಷರ ಅರಮನೆಯನ್ನು ಕೂಡಲೇ ಬಿಟ್ಟುಕೊಡಬೇಕು, ಮೌಲ್ಯಯುತ ಕಲೆ ಮತ್ತು ಕಲಾಕೃತಿಗಳನ್ನು ರಕ್ಷಿಸಬೇಕೆಂದು ಈ ಹಿಂದೆ ಪ್ರತಿಭಟನೆಗೆ ಬೆಂಬಲ ನೀಡಿದ್ದ ಹಿರಿಯ ಬೌದ್ಧ ಸನ್ಯಾಸಿಯೊಬ್ಬರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.

‘ಈ ಕಟ್ಟಡ ದೇಶದ ಆಸ್ತಿ ಮತ್ತು ಅದನ್ನು ರಕ್ಷಿಸಬೇಕು’ ಎಂದು ಬೌದ್ಧ ಬಿಕ್ಕು ಒಮಲ್ಪೆ ಸೊಬಿತಾ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.