ADVERTISEMENT

ನಿಮ್ಮ ಸರ್ಕಾರವನ್ನು ಕಿತ್ತೊಗೆಯಿರಿ: ಉಕ್ರೇನ್‌ ಸೇನೆಗೆ ಕರೆಕೊಟ್ಟ ಪುಟಿನ್‌

ಏಜೆನ್ಸೀಸ್
Published 25 ಫೆಬ್ರುವರಿ 2022, 16:22 IST
Last Updated 25 ಫೆಬ್ರುವರಿ 2022, 16:22 IST
ವ್ಲಾಡಿಮಿರ್‌ ಪುಟಿನ್‌
ವ್ಲಾಡಿಮಿರ್‌ ಪುಟಿನ್‌   

ಮಾಸ್ಕೊ: ಉಕ್ರೇನ್‌ನಲ್ಲಿರುವ ಸರ್ಕಾರವನ್ನು ಕಿತ್ತೊಗೆಯುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಶುಕ್ರವಾರ ಉಕ್ರೇನ್‌ ಸೇನೆಗೇ ಕರೆ ನೀಡಿದ್ದಾರೆ. ಅಲ್ಲಿರುವುದು ಭಯೋತ್ಪಾದಕರು, ಮಾದಕ ವ್ಯಸನಿಗಳು ಮತ್ತು ನವ ನಾಜಿಗಳ ಗುಂಪಿನ ನಾಯಕತ್ವ ಎಂದೂ ಅವರು ಟೀಕಿಸಿದ್ದಾರೆ.

ಗುರುವಾರ ತಮ್ಮ ಸಂದೇಶವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪುಟಿನ್‌, ‘ಅಧಿಕಾರವನ್ನು ಕೈಗೆತ್ತಿಕೊಳ್ಳಿ’ ಎಂದು ಉಕ್ರೇನ್‌ ಮಿಲಿಟರಿಗೆ ತಿಳಿಸಿದರು.

‘ಡ್ರಗ್ ವ್ಯಸನಿಗಳು ಮತ್ತು ನವ-ನಾಜಿಗಳ ಗುಂಪಿಗಿಂತಲೂ ನಿಮ್ಮನ್ನು ಒಪ್ಪಿಕೊಳ್ಳುವುದು ಸುಲಭ ಎಂದು ಅನಿಸುತ್ತಿದೆ’ ಎಂದೂ ಅವರು ಉಕ್ರೇನ್‌ ಸೇನೆಯನ್ನು ಉಲ್ಲೇಖಿಸಿ ಹೇಳಿದರು.

ADVERTISEMENT

ರಷ್ಯಾದ ಮಿಲಿಟರಿಯನ್ನು ಪ್ರಚೋದಿಸಲು ಉಕ್ರೇನ್‌ನ ರಾಷ್ಟ್ರೀಯವಾದಿಗಳು ಪ್ರಮುಖ ನಗರಗಳ ವಸತಿ ಪ್ರದೇಶಗಳಲ್ಲಿ ಭಾರೀ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಪುಟಿನ್ ಆರೋಪಿಸಿದರು.

ಉಕ್ರೇನ್‌ನ ನಾಯಕತ್ವವು ಭಯೋತ್ಪಾದಕರಂತೆ ವರ್ತಿಸುತ್ತಿದೆ. ನಾಗರಿಕರ ಸಾವುನೋವುಗಳಿಗೆ ರಷ್ಯಾವನ್ನು ದೂರಲಿದೆ. ಅದಕ್ಕಾಗಿ ಜನರ ಹಿಂದೆ ಅಡಗಿದೆ ಎಂದು ಹೇಳಿದರು.

‘ಇದು ವಿದೇಶಿ ಸಲಹೆಗಾರರ, ಅದರಲ್ಲೂ ಅಮೆರಿಕದ ಶಿಫಾರಸಿನ ಮೇರೆಗೆ ನಡೆಯುತ್ತಿದೆ ಎಂಬ ವಾಸ್ತವ ಗೊತ್ತಿದೆ,’ ಎಂದು ಪುಟಿನ್ ಅಮೆರಿಕವನ್ನೂ ಟೀಕಿಸಿದರು.

ರಷ್ಯಾ ಪಡೆಗಳು ಉಕ್ರೇನ್‌ನಲ್ಲಿರುವ ರಾಷ್ಟ್ರೀಯವಾದಿಗಳನ್ನು ಮಾತ್ರ ಗುರಿಯಾಗಿಸಿಕೊಂಡಿವೆ. ನಾಗರಿಕರನ್ನಲ್ಲ ಎಂದು ಪುಟಿನ್ ಮತ್ತು ರಷ್ಯಾದ ಉನ್ನತ ಅಧಿಕಾರಿಗಳು ಹೇಳುತ್ತಾ ಬಂದಿದ್ದಾರೆ.

ಇದೇ ವೇಳೆ ಅವರು ರಷ್ಯಾ ಸೇನಾ ಪಡೆಗಳನ್ನೂ ಶ್ಲಾಘಿಸಿದರು. ‘ಧೈರ್ಯದಿಂದ, ವೃತ್ತಿಪರವಾಗಿ ಸೈನಿಕರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಪುಟಿನ್ ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.