ADVERTISEMENT

ಉಕ್ರೇನ್‌ ಜತೆಗೆ ಮಾತುಕತೆ; ಝೆಲೆನ್‌ಸ್ಕಿ ಜತೆಗಲ್ಲ: ಪುಟಿನ್‌

ಏಜೆನ್ಸೀಸ್
Published 29 ಜನವರಿ 2025, 14:04 IST
Last Updated 29 ಜನವರಿ 2025, 14:04 IST
ವ್ಲಾದಿಮಿರ್‌ ಪುಟಿನ್– ಎಪಿ/ಪಿಟಿಐ ಚಿತ್ರ
ವ್ಲಾದಿಮಿರ್‌ ಪುಟಿನ್– ಎಪಿ/ಪಿಟಿಐ ಚಿತ್ರ   

ಮಾಸ್ಕೊ: ‘ಉಕ್ರೇನ್‌ ಜತೆಗೆ ಶಾಂತಿಮಾತುಕತೆ ನಡೆಸಬಹುದು’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮಂಗಳವಾರ ಹೇಳಿದ್ದಾರೆ. ಆದರೆ, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಜತೆಗೆ ನೇರ ಮಾತುಕತೆಯನ್ನು ಅವರು ತಳ್ಳಿಹಾಕಿದ್ದಾರೆ.

‘ಮಾತುಕತೆಯಲ್ಲಿ ಭಾಗಿಯಾಗಲು ಝೆಲೆನ್‌ಸ್ಕಿ ಬಯಸಿದರೆ, ನಾನು ನನ್ನ ಪ್ರತಿನಿಧಿಗಳನ್ನು ಮಾತುಕತೆಗೆ ನಿಯೋಜಿಸುತ್ತೇನೆ. ಉಕ್ರೇನ್‌ ನಾಯಕ ಅಧಿಕೃತ ಅಧ್ಯಕ್ಷನಲ್ಲ, ಏಕೆಂದರೆ ಅಧ್ಯಕ್ಷರ ಅಧಿಕಾರ ಅವಧಿ ಸೇನಾಡಳಿತದ ಅವಧಿಯಲ್ಲೇ ಮುಗಿದು ಹೋಗಿದೆ’ ಎಂದು ಪುಟಿನ್‌ ಹೇಳಿದ್ದಾರೆ.

‘ಉಕ್ರೇನ್‌ಗೆ ಪಶ್ಚಿಮದ ದೇಶಗಳು ತಮ್ಮ ಬೆಂಬಲ ಸ್ಥಗಿತಗೊಳಿಸಿದರೆ, ಕೇವಲ ಎರಡೇ ತಿಂಗಳಲ್ಲಿ ಅಥವಾ ಅದಕ್ಕೂ ಮೊದಲೇ ಈ ಯುದ್ಧ ಕೊನೆಗೊಳ್ಳಲಿದೆ’ ಎಂದು ಪುಟಿನ್‌ ಹೇಳಿದ್ದಾರೆ.  

ADVERTISEMENT

ಪುಟಿನ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಝೆಲೆನ್‌ಸ್ಕಿ, ‘ಪುಟಿನ್ ಮಾತುಕತೆಗೆ ಹೆದರುತ್ತಿದ್ದಾರೆ. ಮೂರು ವರ್ಷಗಳಿಂದ ನಡೆಯುತ್ತಿರುವ ಸಂಘರ್ಷ ತೀವ್ರಗೊಳಿಸಲು ಸಿನಿಕತನದ ತಂತ್ರಗಳನ್ನು ಬಳಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಮಾತುಕತೆಗೆ ಪುಟಿನ್‌ ಹೆದರುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ. ಬಲಿಷ್ಠ ನಾಯಕರನ್ನು ಕಂಡರೆ ಪುಟಿನ್‌ಗೆ ಯಾವಾಗಲೂ ಹೆದರಿಕೆ. ಯುದ್ಧವನ್ನು ಮತ್ತಷ್ಟು ದೀರ್ಘ ಕಾಲ ಮುಂದುವರಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಲಿದ್ದೇನೆ ಎನ್ನುವುದನ್ನು ಅವರು ದೃಢಪಡಿಸಿದ್ದಾರೆ’ ಎಂದು ಝೆಲೆನ್‌ಸ್ಕಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಾವು ಅಧಿಕಾರ ವಹಿಸಿಕೊಂಡ ಮೇಲೆ ಈ ಯುದ್ಧ ಕೊನೆಗೊಳಿಸುವಂತೆ ಎರಡೂ ರಾಷ್ಟ್ರಗಳ ಮೇಲೆ ಒತ್ತಡ ಹೇರಿದ್ದಾರೆ. ಅಲ್ಲದೆ, ರಷ್ಯಾ ಮೇಲೆ ಮತ್ತಷ್ಟು ನಿರ್ಬಂಧ ಹೇರುವ ಎಚ್ಚರಿಕೆ ಕೂಡ ನೀಡಿದ್ದಾರೆ. ಇದೇ ವೇಳೆ ಝೆಲೆನ್‌ಸ್ಕಿ ಯುದ್ಧ ಕೊನೆಗೊಳಿಸುವ ಸಂಬಂಧ ಒಪ್ಪಂದದ ಮಾತುಕತೆಗೆ ಸಿದ್ಧವಿರುವುದಾಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.