ADVERTISEMENT

ಜನಾಂಗೀಯ ತಾರತಮ್ಯ ವಿಷಯ ತಿಳಿದು ಇಡೀ ಕುಟುಂಬ ದುಃಖಿತವಾಗಿದೆ: ರಾಣಿ ಎಲಿಜಬೆತ್

ಏಜೆನ್ಸೀಸ್
Published 10 ಮಾರ್ಚ್ 2021, 4:42 IST
Last Updated 10 ಮಾರ್ಚ್ 2021, 4:42 IST
ರಾಣಿ ಎಲಿಜಬೆತ್ (ಎಎಫ್‌ಪಿ ಚಿತ್ರ)
ರಾಣಿ ಎಲಿಜಬೆತ್ (ಎಎಫ್‌ಪಿ ಚಿತ್ರ)   

ಲಂಡನ್: ಜನಾಂಗೀಯ ತಾರತಮ್ಯಕ್ಕೆ ಸಂಬಂಧಿಸಿ ಪ್ರಿನ್ಸ್‌ ಹ್ಯಾರಿ ಪತ್ನಿ ಮೇಘನ್‌ ಮಾರ್ಕೆಲ್‌ ಮಾಡಿರುವ ಆರೋಪಕ್ಕೆ ರಾಣಿ ಎಲಿಜಬೆತ್ ಪ್ರತಿಕ್ರಿಯಿಸಿದ್ದು, ಸಮಸ್ಯೆಯನ್ನು ಖಾಸಗಿಯಾಗಿ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.

‘ಮೇಘನ್ ಆರೋಪದ ಬಗ್ಗೆ ಕಾಳಜಿ ಹಾಗೂ ಕಳಕಳಿ ಇದೆ. ಹ್ಯಾರಿ ಮತ್ತು ಮೇಘನ್‌ಗೆ ಕಳೆದ ಕೆಲವು ವರ್ಷಗಳು ಎಷ್ಟು ಸವಾಲಿನಿಂದ ಕೂಡಿದ್ದವು ಎಂಬುದನ್ನು ತಿಳಿದು ಇಡೀ ಕುಟುಂಬ ದುಃಖಿತವಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಈಗ ಕೇಳಿಬಂದಿರುವ ಆರೋಪಗಳು, ವಿಶೇಷವಾಗಿ ಜನಾಂಗೀಯ ತಾರತಮ್ಯಕ್ಕೆ ಸಂಬಂಧಿಸಿದ್ದು ಗಂಭೀರವಾದದ್ದು. ಸಮಸ್ಯೆಗಳನ್ನು ಕುಟುಂಬವು ಖಾಸಗಿಯಾಗಿ ಪರಿಹರಿಸಿಕೊಳ್ಳಲಿದೆ’ ಎಂದೂ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೂ ಮುನ್ನ, ಮೇಘನ್ ಹೇಳಿಕೆಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಗಳಿಗೆ ಹ್ಯಾರಿ ಅವರ ತಂದೆ ಪ್ರಿನ್ಸ್ ಚಾರ್ಲ್ಸ್‌ ಅವರು ಉತ್ತರಿಸಲು ನಿರಾಕರಿಸಿದ್ದರು.

ಅಮೆರಿಕದ 'ಟಾಕ್‌ ಶೋ' ನಿರೂಪಕಿ ಓಪ್ರಾ ವಿನ್‌ಫ್ರೇಗೆ ನೀಡಿರುವ ಸಂದರ್ಶನವೊಂದರಲ್ಲಿ ಮೇಘನ್‌ ಮಾರ್ಕೆಲ್‌ ನೀಡಿದ ಹೇಳಿಕೆ ಬಳಿಕ ಬಂಕಿಂಗ್‌ಹ್ಯಾಮ್ ಅರಮನೆ ಒತ್ತಡಕ್ಕೆ ಸಿಲುಕಿತ್ತು. ಸಂದರ್ಶನವು ಭಾನುವಾರ ಪ್ರಸಾರವಾಗಿತ್ತು.

ಏನು ಹೇಳಿದ್ದರು ಮೇಘನ್‌?

'ನನ್ನ ಮಗ ಆರ್ಚಿ ಗರ್ಭದಲ್ಲಿದ್ದಾಗ ರಾಜಮನೆತನ ಆತಂಕದಲ್ಲಿತ್ತು. ಮಗುವೇನಾದರೂ ಹುಟ್ಟಿದರೆ ಅದರ ಚರ್ಮ ಎಷ್ಟು ಗಾಢವಾಗಿರಬಹುದು ಎಂಬೆಲ್ಲ ಚರ್ಚೆಗಳು ಅಲ್ಲಿ ನಡೆಯುತ್ತಿದ್ದವು. ನಾನು ಮಾತ್ರ ರಕ್ಷಣೆಗೆ ಒಳಪಟ್ಟಿರಲಿಲ್ಲ. ಆದರೆ, ಕುಟುಂಬದ ಇತರ ಸದಸ್ಯರನ್ನು ರಕ್ಷಿಸಿಕೊಳ್ಳಲು ಅವರು ಸುಳ್ಳು ಹೇಳಲು ಸಿದ್ಧರಿದ್ದರು. ನನ್ನನ್ನು ಮತ್ತು ನನ್ನ ಗಂಡನನ್ನು ರಕ್ಷಿಸಲು ಸತ್ಯವನ್ನು ಹೇಳಲು ಅವರು ಸಿದ್ಧರಿರಲಿಲ್ಲ’ ಎಂದು ಸಂದರ್ಶನದಲ್ಲಿ ಮೇಘನ್‌ ಮಾರ್ಕೆಲ್‌ ಹೇಳಿದ್ದರು.

ರಾಜಮನೆತನದಲ್ಲಿದ್ದ ಸಂದರ್ಭದಲ್ಲಿ ಯಾವುದೇ ಬೆಂಬಲ ದೊರೆಯದೆ ಆತ್ಮಹತ್ಯೆಯ ಯೋಚನೆಯೂ ಬಂದಿತ್ತು ಎಂದು ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.