ADVERTISEMENT

ಅಮೆರಿಕದಲ್ಲಿ ಇನ್ನೂ ನಿಂತಿಲ್ಲ ಪ್ರತಿಭಟನೆ

ಪಿಟಿಐ
Published 3 ಜೂನ್ 2020, 19:25 IST
Last Updated 3 ಜೂನ್ 2020, 19:25 IST
ಜಾರ್ಜ್‌ ಫ್ಲಾಯ್ಡ್‌ ಸಾವನ್ನು ಖಂಡಿಸಿ ಪೋರ್ಟ್‌ಲ್ಯಾಂಡ್‌ಲ್ಲಿ ಸಾವಿರಾರು ಜನರು ರಸ್ತೆಯ ಮೇಲೆ ಮಲಗಿ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ
ಜಾರ್ಜ್‌ ಫ್ಲಾಯ್ಡ್‌ ಸಾವನ್ನು ಖಂಡಿಸಿ ಪೋರ್ಟ್‌ಲ್ಯಾಂಡ್‌ಲ್ಲಿ ಸಾವಿರಾರು ಜನರು ರಸ್ತೆಯ ಮೇಲೆ ಮಲಗಿ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ   

ವಾಷಿಂಗ್ಟನ್‌: ಜಾರ್ಜ್‌ ಫ್ಲಾಯ್ಡ್‌ ಸಾವನ್ನು ಖಂಡಿಸಿ ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆ ಬುಧವಾರವೂ ಮುಂದುವರಿದಿದೆ.

ಫಿಲಡೆಲ್ಫಿಯಾ, ನ್ಯೂಯಾರ್ಕ್‌, ಷಿಕಾಗೊ, ವಾಷಿಂಗ್ಟನ್‌ ಡಿಸಿ ಮುಂತಾದ ನಗರಗಳಲ್ಲಿ ಜನರು ಕರ್ಫ್ಯೂ ಉಲ್ಲಂಘಿಸಿ ಬೀದಿಗಿಳಿದರು. ಒಂದೆರಡು ಕಡೆಗಳಲ್ಲಿ ಹಿಂಸಾಚಾರ ನಡೆದಿರುವುದನ್ನು ಬಿಟ್ಟರೆ ಪ್ರತಿಭಟನೆ ಬಹುತೇಕ ಶಾಂತವಾಗಿತ್ತು. ಕೆಲವು ಕಡೆಗಳಲ್ಲಿ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿದ್ದಾರೆ.

ಶ್ವೇತಭವನದ ಸಮೀಪದ ಕೆಲವು ರಸ್ತೆಗಳಲ್ಲಿ ಸೇನಾ ವಾಹನಗಳು ಓಡಾಡಿರುವುದು ಬುಧವಾರ ಕಂಡುಬಂದಿದೆ. ಶಸ್ತ್ರಸಜ್ಜಿತ ಪೊಲೀಸರು ಭಾರಿ ಸಂಖ್ಯೆಯಲ್ಲಿ ಸುರಕ್ಷತಾ ವ್ಯವಸ್ಥೆಯಲ್ಲಿ ತೊಡಗಿಕೊಂಡಿದ್ದಾರೆ.

ADVERTISEMENT

ಅನೇಕ ನಗರಗಳಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಪ್ರತಿಭಟನಕಾರರ ನಡುವೆ ಚಕಮಕಿ ನಡೆದಿರುವುದು ವರದಿಯಾಗಿದೆ. ‘ಕರಿಯರ ಜೀವಕ್ಕೂ ಬೆಲೆ ಇದೆ, ನ್ಯಾಯ ಸಿಗುವವರೆಗೂ ಶಾಂತಿ ಇರದು’ ಎಂಬ ಘೋಷಣೆಗಳನ್ನು ಪ್ರತಿಭಟನಕಾರರು ಕೂಗುತ್ತಿದ್ದರು. ಕೆಲವು ಸೆನೆಟರ್‌ಗಳು ಸಹ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.

ಮಾನವಹಕ್ಕು ತನಿಖೆ: ಫ್ಲಾಯ್ಡ್‌ ಸಾವಿಗೆ ಸಂಬಂಧಿಸಿದಂತೆ ಮಿನೆಸೊಟಾದ ಮಾನವ ಹಕ್ಕುಗಳ ವಿಭಾಗವು ಮಿನಿಯಾಪೊಲೀಸ್‌ನ ಪೊಲೀಸ್‌ ಇಲಾಖೆಯ ವಿರುದ್ಧ ತನಿಖೆಗೆ ಮುಂದಾಗಿದೆ.

ಈ ವಿಚಾರವಾಗಿ ಪೊಲೀಸರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಮಾನವಹಕ್ಕುಗಳ ಆಯೋಗದ ಗವರ್ನರ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.