ADVERTISEMENT

‘ರಕ್ಷಣಾ ಸಂಬಂಧಕ್ಕೆ ಮತ್ತಷ್ಟು ಬಲ’

ಅಮೆರಿಕದ ನೌಕಾಪಡೆಯ ವಾಯುನೆಲೆಗೆ ರಾಜನಾಥ್ ಸಿಂಗ್ ಭೇಟಿ

ಪಿಟಿಐ
Published 18 ಡಿಸೆಂಬರ್ 2019, 19:41 IST
Last Updated 18 ಡಿಸೆಂಬರ್ 2019, 19:41 IST
ಅಮೆರಿಕದ ವರ್ಜೀನಿಯಾದಲ್ಲಿರುವ ಓಷಿಯಾನ ನೌಕಾಪಡೆಯ ವಾಯುನೆಲೆಗೆ ಮಂಗಳವಾರ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿದರು. ಭಾರತದ ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲಾ, ರಕ್ಷಣಾ ಕಾರ್ಯದರ್ಶಿಗಳಾದ ಡಾ. ಅಜಯ್‌ಕುಮಾರ್ ಮತ್ತು ಸುಭಾಷ್ ಚಂದ್ರ ಇದ್ದರು –ಪಿಟಿಐ ಚಿತ್ರ
ಅಮೆರಿಕದ ವರ್ಜೀನಿಯಾದಲ್ಲಿರುವ ಓಷಿಯಾನ ನೌಕಾಪಡೆಯ ವಾಯುನೆಲೆಗೆ ಮಂಗಳವಾರ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿದರು. ಭಾರತದ ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲಾ, ರಕ್ಷಣಾ ಕಾರ್ಯದರ್ಶಿಗಳಾದ ಡಾ. ಅಜಯ್‌ಕುಮಾರ್ ಮತ್ತು ಸುಭಾಷ್ ಚಂದ್ರ ಇದ್ದರು –ಪಿಟಿಐ ಚಿತ್ರ   

ವಾಷಿಂಗ್ಟನ್ : ಅಮೆರಿಕದ ನೌಕಾಪಡೆಯ ವಾಯುನೆಲೆಗೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿದ್ದು, ಉಭಯ ದೇಶಗಳ ನಡುವಿನ ರಕ್ಷಣಾ ಸಂಬಂಧಗಳು ಮತ್ತಷ್ಟು ಬಲಗೊಳ್ಳಲಿವೆ ಎಂದು ಆಶಿಸಿದ್ದಾರೆ.

ವರ್ಜೀನಿಯಾದ ನಾರ್ಫೋಕ್‌ನಲ್ಲಿರುವ ನೌಕಾಪಡೆಯ ವಾಯುನೆಲೆಯಲ್ಲಿ ಅವರು ಬೋಯಿಂಗ್‌ ಫೈಟರ್ ಜೆಟ್‌ನ ಪ್ರದರ್ಶನವನ್ನು ವೀಕ್ಷಿಸಿದರು.

ರಾಜನಾಥ್ ಸಿಂಗ್ ಅವರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಸೇರಿದಂತೆ ಭಾರತದ ರಕ್ಷಣಾ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ADVERTISEMENT

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮೈಕ್ ಎಸ್ಪರ್, ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ವಿವಿಧ ವಿಮಾನಗಳ ಕಾರ್ಯನಿರ್ವಹಣೆಯ ಕುರಿತು ರಾಜನಾಥ್ ಅವರಿಗೆ ಮಾಹಿತಿ ನೀಡಿದರು.

‘ಅಮೆರಿಕದ ನಾರ್ಫೋಕ್‌ನ ಓಷಿಯಾನ ನೌಕಾ ಪಡೆಯ ವಾಯುನೆಲೆಗೆ ಭೇಟಿ ಕೊಟ್ಟಿದ್ದೆ. ಅಲ್ಲಿ ಸ್ಥಿರ ಪ್ರದರ್ಶನ ಮತ್ತು ಎಫ್‌/ಎ–18 ಇ ವಿಮಾನ ಹಾರಾಟವನ್ನು ವೀಕ್ಷಿಸಿದೆ’ ಎಂದು ರಾಜನಾಥ್ ಸಿಂಗ್ ಮಂಗಳವಾರ ಟ್ವೀಟ್ ಮಾಡಿದ್ದರು.

‘ನಿಮಿಟ್ಜ್ ಕ್ಲಾಸ್ ವಿಮಾನ ನೌಕೆಯಾದ ಯುಎಸ್‌ಎಸ್ ಡ್ವೈಟ್ ಡಿ. ಐಸೆನ್‌ಹೌವರ್‌ನಲ್ಲಿ ಪ್ರಯಾಣಿಸುವ ಅವಕಾಶ ನನ್ನದಾಗಿತ್ತು. ಭಾರತ ಮತ್ತು ಅಮೆರಿಕ ನಡುವಿನ ಬಲವಾದ ರಕ್ಷಣಾ ಸಂಬಂಧಗಳನ್ನು ಇದು ಪ್ರತಿಬಿಂಬಿಸುತ್ತದೆ’ ಎಂದೂ ರಾಜನಾಥ್ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

‘ರಾಜನಾಥ್ ಅವರ ಅಮೆರಿಕ ಭೇಟಿಯು ಉಭಯ ದೇಶಗಳ ರಕ್ಷಣಾ ಪಾಲುದಾರಿಕೆ ಮತ್ತು ನೌಕಾಪಡೆಗಳ ನಡುವಿನ ನಿಕಟ ಸಂಬಂಧವನ್ನು ಎತ್ತಿತೋರಿಸಿದೆ’ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಾರತೀಯ ವಾಯುಪಡೆ ಮತ್ತು ನೌಕಾಪಡೆಯಲ್ಲಿ ಕೆಲ ವಿಮಾನಗಳನ್ನು ಸೇರ್ಪಡೆಗೊಳಿಸಲು ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿರುವ ಹಿನ್ನೆಲೆಯಲ್ಲಿ ರಾಜನಾಥ್ ಅವರ ಈ ಭೇಟಿಯು ಅತ್ಯಂತ ಮಹತ್ವ ಪಡೆದುಕೊಂಡಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.