ADVERTISEMENT

ಆಕ್ಸ್‌ಫರ್ಡ್‌ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಶ್ಮಿ ಸಾಮಂತ್‌ ರಾಜೀನಾಮೆ

ಪಿಟಿಐ
Published 18 ಫೆಬ್ರುವರಿ 2021, 12:55 IST
Last Updated 18 ಫೆಬ್ರುವರಿ 2021, 12:55 IST
ರಶ್ಮಿ ಸಾಮಂತ್
ರಶ್ಮಿ ಸಾಮಂತ್   

ಲಂಡನ್: ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ (ಎಸ್‌ಯು) ಅಧ್ಯಕ್ಷರಾಗಿ ಇತ್ತೀಚೆಗೆಷ್ಟೇ ಆಯ್ಕೆಯಾದ ಮಣಿಪಾಲ ಮೂಲದ ರಶ್ಮಿ ಸಾಮಂತ್‌ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಸ್ಥಾನಕ್ಕೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಆಗಿದ್ದ ರಶ್ಮಿ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಈ ಹಿಂದೆ ಪೋಸ್ಟ್‌ ಮಾಡಿದ್ದ ಜನಾಂಗೀಯ ಮತ್ತು ಸಂವೇದನಾರಹಿತವಾದ ಹೇಳಿಕೆಗಳಿಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ADVERTISEMENT

ಇವರ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.

ವಿವಾದಾತ್ಮಕ ಬರಹದಲ್ಲಿ ಏನಿತ್ತು

2017ರಲ್ಲಿ ಬರ್ಲಿನ್‌ನ ಹಾಲೊಕಾಸ್ಟ್‌ ಸ್ಮಾರಕಕ್ಕೆ ಭೇಟಿನೀಡಿದ್ದ ರಶ್ಮಿ ಸ್ಮಾರಕದ ಕುರಿತು ವಿವಾದಾತ್ಮಕ ಸಾಲುಗಳನ್ನು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ನಂತರ ಮಲೇಷ್ಯಾದಲ್ಲಿ ತೆಗೆಸಿಕೊಂಡ ಫೋಟೊಗೆ ‘ಚಿಂಗ್‌ ಚಾಂಗ್’ ಎಂಬ ಒಕ್ಕಣೆ ಬರೆದುಕೊಂಡಿದ್ದು, ಚೀನಾದ ವಿದ್ಯಾರ್ಥಿಗಳು ತೀವ್ರ ಅಸಮಾಧಾನ ಹೊರ ಹಾಕಿದರು.

ಭಾರತ ಮೂಲದ ಮೊದಲ ವಿದ್ಯಾರ್ಥಿನಿ

ಈಚೆಗೆ ಆಕ್ಸ್‌ಫರ್ಡ್‌ ಸ್ಟುಡೆಂಟ್‌ ಯೂನಿಯನ್‌ಗೆ ನಡೆದ ಚುನಾವಣೆಯಲ್ಲಿ ರಶ್ಮಿ ಸಾಮಂತ್ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆಕ್ಸ್‌ಫರ್ಡ್‌ ಯೂನಿಯನ್‌ ಅಧ್ಯಕ್ಷೆ ಸ್ಥಾನಕ್ಕೇರಿದ ಮೊದಲ ಭಾರತೀಯ ಯುವತಿ ಎಂಬ ಮನ್ನಣೆಗೂ ಪಾತ್ರರಾಗಿದ್ದರು. ಮಣಿಪಾಲ ಹಾಗೂ ಉಡುಪಿಯಲ್ಲಿಪ್ರಾಥಮಿಕ ಶಿಕ್ಷಣ, ಎಂಐಟಿಯಲ್ಲಿ ಮೆಕಾನಿಕಲ್‌ ಎಂಜಿನಿಯರಿಂಗ್ ಪದವಿ ಪಡೆದಿದ್ದ ರಶ್ಮಿ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಎನರ್ಜಿ ಸಿಸ್ಟಮ್ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.