ADVERTISEMENT

ಪಾಕಿಸ್ತಾನದ ವಿದ್ಯುತ್‌ ಸಮಸ್ಯೆಗೆ ನೆರವು ನೀಡಲು ಸಿದ್ಧ: ಅಮೆರಿಕ

ಪಿಟಿಐ
Published 24 ಜನವರಿ 2023, 2:50 IST
Last Updated 24 ಜನವರಿ 2023, 2:50 IST
   

ವಾಷಿಂಗ್ಟನ್‌: ರಾಷ್ಟ್ರೀಯ ವಿದ್ಯುತ್ ಗ್ರಿಡ್‌ನಲ್ಲಿನ ವೈಫಲ್ಯದಿಂದ ಗಂಭೀರ ವಿದ್ಯುತ್‌ ಸಮಸ್ಯೆ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಸಹಾಯ ಮಾಡಲು ಅಮೆರಿಕ ಸಿದ್ಧವಾಗಿದೆ ಎಂದು ಬೈಡೆನ್ ಆಡಳಿತದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಸೋಮವಾರ ಬೆಳಿಗ್ಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯವಾಗಿತ್ತು. ರಾಷ್ಟ್ರೀಯ ವಿದ್ಯುತ್ ಗ್ರಿಡ್‌ನಲ್ಲಿ ವೈಫಲ್ಯ ಉಂಟಾಗಿ ಕರಾಚಿ, ಲಾಹೋರ್‌, ಪೇಶಾವರ ಸೇರಿದಂತೆ ಪ್ರಮುಖ ನಗರಗಳಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು.

ಬೆಳಿಗ್ಗೆ 7.34ರ (ಸ್ಥಳೀಯ ಸಮಯ) ಹೊತ್ತಿಗೆ ರಾಷ್ಟ್ರೀಯ ಗ್ರಿಡ್‌ನಲ್ಲಿ ವಿದ್ಯುತ್‌ ಹರಿವಿನ ಪ್ರಮಾಣ ಕುಂಠಿತವಾಗಿದ್ದು, ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು.

ADVERTISEMENT

‘ಪಾಕಿಸ್ತಾನದಲ್ಲಿ ಏನಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ವಿದ್ಯುತ್‌ ಸಮಸ್ಯೆ ಎದುರಿಸಿದ ಎಲ್ಲರ ಬಗ್ಗೆ ಕಾಳಜಿ ಇದೆ. ಪಾಕಿಸ್ತಾನಕ್ಕೆ ಯಾವುದೇ ಸವಾಲುಗಳನ್ನು ಎದುರಿಸುವಲ್ಲಿ ಅಮೆರಿಕ ಸಹಾಯ ಮಾಡಿದೆ’ ಎಂದು ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ನೆಡ್ ಪ್ರೈಸ್ ತಿಳಿಸಿದರು.

‘ನಾವು ನೀಡಲು ಸಾಧ್ಯವಿರುವ ಅಗತ್ಯ ನೆರವಿಗೆ ಸಿದ್ಧವಿದ್ದೇವೆ. ಆದರೆ ಯಾವುದೇ ನಿರ್ದಿಷ್ಟ ವಿನಂತಿ ಪಾಕಿಸ್ತಾನದಿಂದ ಬಂದಿಲ್ಲ’ ಎಂದು ಅವರು ಹೇಳಿದರು.

ಪಾಕಿಸ್ತಾನದಲ್ಲಿ ವಿದೇಶಿ ವಿನಿಮಯ ಕುಸಿದಿದ್ದು, ಇತ್ತೀಚಿನ ವರ್ಷಗಳಲ್ಲಿಯೇ ತೀವ್ರ ಆರ್ಥಿಕ ಬಿಕ್ಕಟ್ಟನ್ನು ದೇಶ ಎದುರಿಸುತ್ತಿದೆ. ಇಂಧನ ಸಂರಕ್ಷಣೆ ಉದ್ದೇಶಗಳಿಗಾಗಿ ಶಾಪಿಂಗ್ ಮಾಲ್‌ಗಳು ಮತ್ತು ಮಾರುಕಟ್ಟೆಗಳನ್ನು ರಾತ್ರಿ 8:30 ಕ್ಕೆ ಮುಚ್ಚಲು ಇಲ್ಲಿನ ಸರ್ಕಾರ ಈ ಹಿಂದೆಯೇ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.