ನವದೆಹಲಿ: ಉಕ್ರೇನ್ನಲ್ಲಿನ ಹಲವು ವಿಶ್ವವಿದ್ಯಾಲಯಗಳು ಸೋಮವಾರ ತನ್ನ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ಆರಂಭಿಸಿವೆ. ಯುದ್ಧದಿಂದಾಗಿ ಶಿಕ್ಷಣ ಮಸುಕಾಗಲಿದೆ ಎಂದು ಆತಂಕದಲ್ಲಿದ್ದ ಭಾರತದ ವಿದ್ಯಾರ್ಥಿಗಳಲ್ಲಿ ಇದು ಹೊಸ ಭರವಸೆ ಮೂಡಿಸಿದೆ.
‘ಆನ್ಲೈನ್ ತರಗತಿ ನಿಜಕ್ಕೂ ಭಾವನಾತ್ಮಕವಾಗಿತ್ತು. ಬೋಧಕರೂ ಭಾವನಾತ್ಮಕವಾಗಿದ್ದರು. ಮಧ್ಯಾಹ್ನ 12.30ರಿಂದ 7 ಗಂಟೆವರೆಗೆ ತರಗತಿಗಳು ನಡೆದವು. ತರಗತಿಯ ವೇಳಾಪಟ್ಟಿಯನ್ನು ಒದಗಿಸಲಾಗಿದೆ’ ಎಂದು ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿದರು.
ಪಶ್ಚಿಮ ಉಕ್ರೇನ್ನಲ್ಲಿ ಇರುವ ಬಹುತೇಕ ವಿಶ್ವವಿದ್ಯಾಲಯಗಳು ಸೋಮವಾರ ಆನ್ಲೈನ್ ತರಗತಿ ಆರಂಭಿಸಿವೆ. ರಷ್ಯಾದ ಪಡೆಗಳು ಶೆಲ್ ದಾಳಿ ಮುಂದುವರಿಸಿರುವ ಕಾರಣ ಭೌತಿಕ ತರಗತಿಗಳ ಪುನಾರಂಭ ಅಸಾಧ್ಯ ಎಂಬ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿವೆ.
ಶೆಲ್ ದಾಳಿಯ ನಡುವೆಯೇ ಸುರಕ್ಷಿತ ತಾಣದಿಂದ ಬೋಧಕರು ಆನ್ಲೈನ್ ತರಗತಿ ನಡೆಸುತ್ತಿದ್ದಾರೆ ಎಂದು ಲೀವ್ನ ಡಾನಿಲೊ ಹಾಲಿಟ್ಸ್ಕೈ ರಾಷ್ಟ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿರುವ ಕನಿಷ್ಕ್ ಅವರು ಪ್ರತಿಕ್ರಿಯಿಸಿದರು.
‘ಏನೂ ಇಲ್ಲದಿರುವುದಕ್ಕಿಂತಲೂ ಇದು ಒಳ್ಳೆಯದು. ಖುಷಿಯಾಗಿದೆ. ನಮ್ಮ ಶಿಕ್ಷಣದ ಭವಿಷ್ಯ ಏನಾದಿತೋ ಎಂಬ ಆತಂಕ ತುಂಬಾ ಕಾಡುತ್ತಿತ್ತು’ ಎಂದುಇನ್ನೊಬ್ಬ ವಿದ್ಯಾರ್ಥಿ ಮನೋಗ್ಯಾ ಪ್ರತಿಕ್ರಿಯಿಸಿದರು.
‘ಆನ್ಲೈನ್ ತರಗತಿಗಳಷ್ಟೇ ಸಾಲದು ಎಂಬುದು ನಮಗೆ ಗೊತ್ತಿದೆ. ಆದರೂ, ಪರವಾಗಿಲ್ಲ. ನಾವು ಶಿಕ್ಷಣ ಮುಂದುವರಿಸಬಹುದು ಎಂದು ವಿನ್ನಿಟ್ಸಿಯಾ ನ್ಯಾಷನಲ್ ಪಿರೊಗೋವ್ ವಿಶ್ವವಿದ್ಯಾಲದಯ ವೈದ್ಯಕೀಯ ವಿದ್ಯಾರ್ಥಿ ಕಿಂಜಾಲ್ ಚೌಹಾಣ್ ಹೇಳಿದರು. ಹಾರ್ಕಿವ್ನ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿ ಮಾರ್ಚ್ 21ರಿಂದ ಆನ್ಲೈನ್ ತರಗತಿ ಆರಂಭಿಸುವ ಸಂಭವವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.