ADVERTISEMENT

ಅಮೆರಿಕ ರಕ್ಷಣಾ ಇಲಾಖೆ: ಲೈಂಗಿಕ ಅಲ್ಪಸಂಖ್ಯಾತರ ಹೊಸ ನಿಯಮ ಜಾರಿ

ಏಜೆನ್ಸೀಸ್
Published 1 ಏಪ್ರಿಲ್ 2021, 7:00 IST
Last Updated 1 ಏಪ್ರಿಲ್ 2021, 7:00 IST
ಲಾಯ್ಡ್ ಆಸ್ಟಿನ್
ಲಾಯ್ಡ್ ಆಸ್ಟಿನ್   

ವಾಷಿಂಗ್ಟನ್‌: ಅಮೆರಿಕದ ಸೇನೆಗೆ ಲೈಂಗಿಕ ಅಲ್ಪಸಂಖ್ಯಾತರ ಸೇರ್ಪಡೆಗೆ ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಿಧಿಸಿದ್ದನಿರ್ಬಂಧವನ್ನು ಅಮೆರಿಕದ ರಕ್ಷಣಾ ಇಲಾಖೆಯು (ಪೆಂಟಗನ್‌) ಅಳಿಸಿ ಹಾಕಿದೆ. ಇಲಾಖೆಯು ಇದರ ಬದಲಿಗೆ ಹೊಸ ನಿಯಮಗಳನ್ನು ಹೊರಡಿಸಿದೆ.

‘ಈ ನಿಯಮದಡಿ ಸೇನಾ ಮಾನದಂಡಗಳನ್ನು ಪೂರೈಸುವ ಎಲ್ಲಾ ಲೈಂಗಿಕ ಅಲ್ಪಸಂಖ್ಯಾತರು ಅಮೆರಿಕದ ಸೇನಾಪಡೆಯಲ್ಲಿ ಸೇವೆ ಸಲ್ಲಿಸಲು ಅರ್ಹರಾಗಿದ್ದಾರೆ. ಅಲ್ಲದೆ ಅವರು ಲಿಂಗ ಪರಿವರ್ತನೆಗೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ಆರೈಕೆಗಳನ್ನು ಕಾನೂನಾತ್ಮಕವಾಗಿ ಪಡೆಯಬಹುದು’ ಎಂದು ರಕ್ಷಣಾ ಇಲಾಖೆಯ ಮುಖ್ಯ ವಕ್ತಾರ ಜಾನ್ ಕಿರ್ಬಿ ಅವರು ಸುದ್ದಿಗಾರರಿಗೆ ಬುಧವಾರ ತಿಳಿಸಿದರು.

ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೋ ಬೈಡನ್‌ ಅವರು ಡೊನಾಲ್ಡ್‌ ಟ್ರಂಪ್‌ ಅವರ ಈ ಆದೇಶವನ್ನು ರದ್ದುಗೊಳಿಸುವ ಕಾರ್ಯಾದೇಶಕ್ಕೆ ಸಹಿ ಹಾಕಿದ್ದರು.

ADVERTISEMENT

ಇದರ ಬೆನ್ನಲ್ಲೇ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಸೇನೆಯ ಹೊಸ ನಿಯಮಗಳನ್ನು ಎರಡು ತಿಂಗಳೊಳಗೆ ಅಂತಿಮಗೊಳಿಸುವಂತೆ ಇಲಾಖೆಗೆ ಸೂಚನೆ ನೀಡಿದ್ದರು. ಈ ಪ್ರಕ್ರಿಯೆ ವೇಳೆ ರಕ್ಷಣಾ ಇಲಾಖೆಯು ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ನಿಯಮಗಳಲ್ಲಿ ಹೊಸ ಬದಲಾವಣೆಗಳನ್ನು ಮಾಡಿದೆ.

‘ಭೂಮಿಯ ಮೇಲಿನ ಅತ್ಯಂತ ಶ್ರೇಷ್ಠ ಹೋರಾಟದ ಪಡೆ ಎಂದರೆ ಅದು ಅಮೆರಿಕದ ಸೇನೆ. ಎಲ್ಲಾ ಅಮೆರಿಕನ್ನರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ರಕ್ಷಿಸುವ ಆಸಕ್ತಿ ಇರುವ ಸ್ವಯಂಸೇವಕರ ತಂಡವನ್ನು ಒಳಗೊಂಡ ಸೇನೆಯನ್ನು ರಚಿಸಿಕೊಂಡಿರುವುದೇ ಇದಕ್ಕೆ ಕಾರಣ. ಇಲ್ಲಿ ಲಿಂಗ ಭೇದ ಇಲ್ಲ, ಸಾಧ್ಯವಿರುವ ಎಲ್ಲಾ ಪ್ರತಿಭೆಗಳನ್ನೂ ಒಟ್ಟುಸೇರಿಸಿ ರಕ್ಷಣಾ ಪಡೆ ರಚಿಸಲಾಗಿದೆ’ ಎಂದು ಆಸ್ಟಿನ್‌ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.