ADVERTISEMENT

ನಾರಾಯಣಮೂರ್ತಿ ಅಳಿಯ ರಿಷಿ ಸುನಕ್‌ ಬ್ರಿಟನ್‌ನ ಮುಂದಿನ ಪ್ರಧಾನಿ?

ಪಿಟಿಐ
Published 15 ಜನವರಿ 2022, 4:40 IST
Last Updated 15 ಜನವರಿ 2022, 4:40 IST
ರಿಷಿ ಸುನಕ್‌
ರಿಷಿ ಸುನಕ್‌   

ಲಂಡನ್‌: ಬ್ರಿಟನ್ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಅಧಿಕಾರದಿಂದ ಕೆಳಗಿಳಿಯಬೇಕು ಎಂಬ ಕೂಗು ಅವರ ಕನ್ಸರ್‌ವೇಟಿವ್‌ ಪಕ್ಷದೊಳಗೆ ಪ್ರಬಲವಾಗಿ ಕೇಳಿಬರುತ್ತಿದೆ. ಇದೇ ವೇಳೆ, ಪ್ರಧಾನಿ ಸ್ಥಾನಕ್ಕೆ ಭಾರತ ಮೂಲದ ರಿಷಿ ಸುನಕ್‌ ಅವರ ಹೆಸರು ಗಟ್ಟಿಯಾಗಿ ಕೇಳಿಬರುತ್ತಿದೆ. ರಿಷಿ ಅವರು ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ.

ರಿಷಿ ಅವರು 2015ರಲ್ಲಿ ಬ್ರಿಟನ್‌ ಸಂಸತ್ತನ್ನು ಪ್ರವೇಶಿಸಿದರು. 2020ರಲ್ಲಿ, ಬ್ರಿಟನ್‌ ಸಚಿವ ಸಂಪುಟದ ಪ್ರಮುಖ ಹುದ್ದೆಗಳಲ್ಲಿ ಒಂದಾದ ಹಣಕಾಸು ಸಚಿವ ಹುದ್ದೆಗೇರಿದರು. ಈ ಹುದ್ದೆಗೇರಿದ ಭಾರತ ಮೂಲದ ಪ್ರಥಮ ವ್ಯಕ್ತಿ ರಿಷಿ.

ಕೋವಿಡ್‌–19 ಸಾಂಕ್ರಾಮಿಕದಿಂದ ಬ್ರಿಟನ್‌ ತತ್ತರಿಸುತ್ತಿರುವ ವೇಳೆ ರಿಷಿ ಅವರು ದೇಶದ ಆರ್ಥಿಕತೆಯನ್ನು ನಿರ್ವಹಿಸುವಲ್ಲಿ ಯಶಸ್ವಿ ಆಗಿದ್ದಾರೆ. ಕೋವಿಡ್‌–19ರಿಂದ ತತ್ತರಿಸಿರುವ ಉದ್ಯೋಗ ಮತ್ತು ಉದ್ಯಮ ವಲಯಕ್ಕೆ ಅನುಕೂಲ ಮಾಡಿಕೊಡಲು ಹಲವಾರು ಯೋಜನೆಗಳನ್ನು ಕೈಗೊಂಡಿದ್ದಾರೆ. ಅವರ ಈ ಎಲ್ಲಾ ಕೆಲಸಗಳೂ ಅವರನ್ನು ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿ ಇರಿಸಿವೆ.

ADVERTISEMENT

ಪ್ರಧಾನಿ ಅವರು, ಕೋವಿಡ್‌ ನಿಯಮಗಳನ್ನು ಮೀರಿ ಡೌನಿಂಗ್‌ ಸ್ಟ್ರೀಟ್‌ ಗಾರ್ಡನ್‌ನಲ್ಲಿ ನಡೆದ ಔತಣಕೂಟದಲ್ಲಿ
ಭಾಗವಹಿಸಿದ್ದರು. ಆ ಕಾರಣಕ್ಕಾಗಿ ವಿಪಕ್ಷಗಳ ಸದಸ್ಯರು ಮಾತ್ರವಲ್ಲದೆ, ಸ್ವಪಕ್ಷದ ಸದಸ್ಯರಿಂದ ಟೀಕೆಗೊಳಗಾಗಿದ್ದರು. ಬಳಿಕ ಸಂಸತ್‌ನಲ್ಲಿ ಕ್ಷಮೆ ಯಾಚಿಸಿದ್ದರು. ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕು ಎಂಬ ಕೂಗು ಉಭಯ ಪಕ್ಷಗಳಿಂದಲೂ ಪ್ರಬಲವಾಗಿ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.