ADVERTISEMENT

ಹಾರ್ಕಿವ್: ರಷ್ಯಾ ಪಡೆಗಳನ್ನು ಹಿಮ್ಮೆಟ್ಟಿಸಿದ ಉಕ್ರೇನ್ ಸೇನೆ

200 ದಿನ ಪೂರೈಸಿದ ಉಭಯ ದೇಶಗಳ ನಡುವಿನ ಯುದ್ಧ

ಏಜೆನ್ಸೀಸ್
Published 11 ಸೆಪ್ಟೆಂಬರ್ 2022, 13:25 IST
Last Updated 11 ಸೆಪ್ಟೆಂಬರ್ 2022, 13:25 IST
ವೊಲೊಡಿಮಿರ್‌ ಝೆಲೆನ್‌ಸ್ಕಿ
ವೊಲೊಡಿಮಿರ್‌ ಝೆಲೆನ್‌ಸ್ಕಿ   

ಕೀವ್, ಉಕ್ರೇನ್: ಕಳೆದ ಒಂದು ವಾರದಿಂದ ರಷ್ಯಾ ಪಡೆಗಳಿಗೆ ಪ್ರತಿರೋಧವನ್ನು ಒಡ್ಡುತ್ತಿರುವ ಉಕ್ರೇನ್‌ ಸೈನ್ಯ, ದೇಶದ ಪೂರ್ವಭಾಗದಲ್ಲಿ ಶತ್ರುಪಡೆಗಳನ್ನು ಹಿಮ್ಮೆಟ್ಟಿಸುವ ಮೂಲಕ ಭಾನುವಾರ ಮೇಲುಗೈ ಸಾಧಿಸಿದೆ.

ಭಾನುವಾರಕ್ಕೆ ಉಕ್ರೇನ್‌ ಮೇಲಿನ ರಷ್ಯಾ ದಾಳಿಗೆ 200 ದಿನಗಳು ಪೂರೈಸಿವೆ. ಈ ಅವಧಿಯಲ್ಲಿ ಉಕ್ರೇನ್‌ ಪಡೆಗಳಿಗೆ ಸಿಕ್ಕ ದೊಡ್ಡ ಗೆಲುವು ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಉಕ್ರೇನ್‌ ಪಡೆಗಳು ತನ್ನ ಸೈನಿಕರನ್ನು ಸುತ್ತುವರಿಯುವುದನ್ನು ತಡೆಯುವುದು ಹಾಗೂ ಆ ಮೂಲಕ ಗಮನಾರ್ಹ ಸಂಖ್ಯೆಯ ಶಸ್ತ್ರಾಸ್ತ್ರಗಳನ್ನು ತೊರೆಯಬೇಕಾದ ಅಪಾಯದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ರಷ್ಯಾ ಪಡೆಗಳು ಹಾರ್ಕಿವ್‌ ಪ್ರದೇಶದಿಂದ ಕಾಲ್ಕಿತ್ತಿವೆ ಎಂದು ಮೂಲಗಳು ಹೇಳಿವೆ.

ADVERTISEMENT

‘ರಷ್ಯಾ ಪಡೆಗಳು ಬೆನ್ನು ತೋರಿಸುವ ಮೂಲಕ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿವೆ’ ಎಂದು ಅಣಕವಾಡಿರುವ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಈ ಕುರಿತ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ರಷ್ಯಾದ ರಕ್ಷಣಾ ಸಚಿವಾಲಯ, ‘ಡೊನೆಟ್‌ಸ್ಕ್ ಪ್ರದೇಶದಲ್ಲಿ ನಿಯೋಜಿಸಿರುವ ಸೇನೆಗೆ ಮತ್ತಷ್ಟು ಬಲತುಂಬುವ ಉದ್ದೇಶದಿಂದ ಹಾರ್ಕಿವ್‌ ಹಾಗೂ ಇಝಿಯಮ್ ಪ್ರದೇಶಗಳಿಂದ ಸೈನಿಕರನ್ನು ವಾಪಸು ಕರೆಸಿಕೊಳ್ಳಲಾಗಿದೆ’ ಎಂದಿದೆ.

ಕಾರ್ಯಾಚರಣೆ ಸ್ಥಗಿತ: ವಿಕಿರಣ ಪ್ರಸರಣವನ್ನು ತಡೆಯುವ ಉದ್ದೇಶದಿಂದ, ಉಕ್ರೇನ್‌ನ ಜಪೋರಿಝಿಯಾದಲ್ಲಿರುವ ಅಣು ವಿದ್ಯುತ್‌ ಸ್ಥಾವರದ ಕೊನೆಯ ರಿಯಾಕ್ಷರ್‌ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಈ ಪ್ರದೇಶದಲ್ಲಿ ರಷ್ಯಾ ಪಡೆಗಳೊಂದಿಗಿನ ಕಾದಾಟ ಹೆಚ್ಚಿದ್ದು, ಸಂಭಾವ್ಯ ಅವಘಡ ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

3 ಸಾವಿರ ಚ.ಕಿ.ಮೀ ಮರುಸ್ವಾಧೀನ: ಉಕ್ರೇನ್

ಕೀವ್: ಈ ತಿಂಗಳ ಅವಧಿಯಲ್ಲಿ ನಡೆಸಿದ ಪ್ರತಿದಾಳಿಯಲ್ಲಿ, ರಷ್ಯಾ ಪಡೆಗಳ ವಶದಲ್ಲಿದ್ದ ತನ್ನ 3,000 ಚದರ ಕಿ.ಮೀ.ಗಿಂತಲೂ ಅಧಿಕ ಪ್ರದೇಶವನ್ನು ಮತ್ತೆ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಉಕ್ರೇನ್‌ ಭಾನುವಾರ ಹೇಳಿದೆ.

‘ದೇಶದ ದಕ್ಷಿಣ ಹಾಗೂ ಪೂರ್ವ ಭಾಗದಲ್ಲಿ ಮಾತ್ರವಲ್ಲ, ಉತ್ತರದಲ್ಲಿಯೂ ಮುನ್ನುಗ್ಗುತ್ತಿದ್ದೇವೆ. ಗಡಿಯಿಂದ 50 ಕಿ.ಮೀ. ದೂರದಲ್ಲಿದ್ದೇವೆ’ ಎಂದು ಉಕ್ರೇನ್‌ ಸೇನೆಯ ಜನರಲ್ ವಾಲೆರಿಯ್‌ ಝಲುಝನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.