ಮಾಸ್ಕೊ: ರಷ್ಯಾದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಕೋವಿಡ್–19 ಲಸಿಕೆ ಜನರ ಬಳಕೆಗೆ ಬಿಡುಗಡೆಯಾಗಲಿದೆ. ರಷ್ಯಾದ ಆರೋಗ್ಯ ಸಚಿವಾಲಯ ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ನೀಡಿದ್ದು, ಆ ಮೂಲಕ ಜಗತ್ತಿನ ಮೊದಲ ಕೋವಿಡ್–19 ಲಸಿಕೆ ಮಂಗಳವಾರ ದಾಖಲಾಗಿದೆ.
ಮಾಸ್ಕೊದ ಗಮೆಲಿಯಾ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯದ ಜಂಟಿಯಾಗಿ ಲಸಿಕೆ ಅಭಿವೃದ್ಧಿ ಪಡಿಸಿದೆ. ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮನುಷ್ಯರ ಮೇಲೆ ಪ್ರಯೋಗ ನಡೆಸಲಾಗಿದೆ.
ದೇಶದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಕೊರೊನಾ ವೈರಸ್ ಲಸಿಕೆಯನ್ನು ಬಳಕೆಗೆ ನೋಂದಾಯಿಸಲಾಗಿದೆ ಹಾಗೂ ಒಬ್ಬಳು ಮಗಳಿಗೆ ಆಗಲೇ ಲಸಿಕೆ ನೀಡಲಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಲ್ಲಿ ಭಾಗಿಯಾದ ಎಲ್ಲ 38 ಜನರಲ್ಲಿಯೂ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದನ್ನು ಗಮನಿಸಿರುವುದಾಗಿ ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ. ಜೂನ್ 18ರಿಂದ ಕ್ಲಿನಿಕಲ್ ಟ್ರಯಲ್‌ಗಳನ್ನು (ಮನುಷ್ಯರ ಮೇಲೆ) ಆರಂಭಿಸಲಾಗಿತ್ತು. ಪ್ರಯೋಗಕ್ಕೆ ಒಳಗಾದವರ ಪೈಕಿ ಮೊದಲ ಗುಂಪು ಜುಲೈ 15ರಂದು ಸಂಶೋಧನಾ ಕೇಂದ್ರಗಳಿಂದ ಬಿಡುಗಡೆಯಾಗಿದೆ ಹಾಗೂ ಎರಡನೇ ಗುಂಪು ಜುಲೈ 20ರಂದು ಮನೆಗೆ ಮರಳಿದೆ.
‘ಈ ಲಸಿಕೆಯನ್ನು ವಿವಿಧ ಹಂತಗಳ ಪರೀಕ್ಷೆಗೆ ಒಳಪಡಿಸಲಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅದರ ಸಾಮರ್ಥ್ಯ ಸಾಬೀತಾಗಿದೆ. ಲಸಿಕೆ ಪಡೆದ ವ್ಯಕ್ತಿಯ ದೇಹದಲ್ಲಿ ಪ್ರತಿಕಾಯಗಳ ಸಂಖ್ಯೆ ಹೆಚ್ಚಳವಾಗಿ, ಆ ಮೂಲಕ ರೋಗ ನಿರೋಧಕ ಶಕ್ತಿ ವೃದ್ಧಿಸಿರುವುದು ಕಂಡು ಬಂದಿದೆ’ ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
‘ಸೆಪ್ಟೆಂಬರ್‌ನಿಂದ ಈ ಲಸಿಕೆಯನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ಆರಂಭಿಸಲಾಗುವುದು. ಅಕ್ಟೋಬರ್‌ನಲ್ಲಿ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು’ ಎಂದೂ ಪುಟಿನ್ ಹೇಳಿದ್ದಾರೆ.
ಆದರೆ, ವಿಶ್ವದ ವೈದ್ಯಕೀಯ ಸಮುದಾಯ ಮಾತ್ರ ಈ ಬಗ್ಗೆ ಸಂದೇಹ ವ್ಯಕ್ತಪಡಿಸಿದೆ. ರಷ್ಯಾ ಸೇರಿದಂತೆ ವಿವಿಧ ದೇಶಗಳ ವಿಜ್ಞಾನಿಗಳು, ಲಸಿಕೆಯನ್ನು ತರಾತುರಿಯಲ್ಲಿ ಬಳಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
‘ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳ್ಳುವ ಮೊದಲೇ ಲಸಿಕೆಯನ್ನು ವ್ಯಾಪಕವಾಗಿ ಬಳಸುವುದು ಸರಿಯಲ್ಲ. ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಮುಖ್ಯ ಘಟ್ಟ. ಸಾವಿರಾರು ಜನರ ಮೇಲೆ ನಡೆಯುವ ಈ ಪ್ರಯೋಗ ಪೂರ್ಣಗೊಂಡು ಫಲಿತಾಂಶ ಬರಲು ಹಲವು ತಿಂಗಳುಗಳೇ ಬೇಕು’ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.