ಉಕ್ರೇನ್‌ನ ಕೀವ್‌ನಲ್ಲಿರುವ ಕೈಗಾರಿಕಾ ಸ್ಥಾವರದ ಮೇಲೆ ರಷ್ಯಾವು ಡ್ರೋನ್ ದಾಳಿ ನಡೆಸಿದ ಬಳಿಕ ಹಾನಿಗೊಂಡ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾದ ಅಗ್ನಿಶಾಮಕ ಸಿಬ್ಬಂದಿ
ಎಎಫ್‌ಪಿ ಚಿತ್ರ
ಕೀವ್: ‘ಉಕ್ರೇನ್‌ನ ಕೀವ್ ಪ್ರಾಂತ್ಯದಲ್ಲಿರುವ ಉಷ್ಣ ವಿದ್ಯುತ್ ಉತ್ಪಾದನಾ ಕೇಂದ್ರದ ಮೇಲೆ ಭಾನುವಾರ ರಾತ್ರಿಯಿಡೀ ರಷ್ಯಾ ಪಡೆಗಳು ದಾಳಿ ನಡೆಸಿವೆ’ ಎಂದು ಇಲ್ಲಿನ ಇಂಧನ ಸಚಿವಾಲಯವು ತಿಳಿಸಿದೆ.
ಉಕ್ರೇನ್‌ನ ಮೇಲೆ ಮೂರೂವರೆ ವರ್ಷಗಳಿಂದ ರಷ್ಯಾ ಸೇನಾ ದಾಳಿ ನಡೆಸುತ್ತಿದೆ. ಶುಕ್ರವಾರವಷ್ಟೇ ಅತೀ ದೊಡ್ಡ ವಾಯುದಾಳಿ ನಡೆಸಿತ್ತು. ಒಂದು ದಿನದ ಅಂತರದಲ್ಲೇ, ವಿದ್ಯುತ್ ಉತ್ಪಾದನಾ ಕೇಂದ್ರಗಳ ಮೇಲೂ ದಾಳಿ ಮುಂದುವರಿಸಿದೆ.
‘ಅವರ ಗುರಿ ಸ್ಪಷ್ಟವಾಗಿದೆ. ಉಕ್ರೇನ್‌ನ ಶಾಂತಿಯುತ ನಾಗರಿಕರಿಗೆ ಮತ್ತಷ್ಟು ತೊಂದರೆ ಮಾಡುವ ಮೂಲಕ ಸಂಕಷ್ಟಕ್ಕೆ ತಳ್ಳುತ್ತಿದ್ದು, ಇಡೀ ದೇಶದ ಮನೆ, ಆಸ್ಪತ್ರೆ, ಶಾಲೆಗಳಿಗೆ ವಿದ್ಯುತ್ ಪೂರೈಕೆ ತಡೆಯುವ ಉದ್ದೇಶ ಹೊಂದಿದ್ದಾರೆ’ ಎಂದು ಸಚಿವಾಲಯವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ರಕ್ಷಣಾ ಕಾರ್ಯಕರ್ತರು ಹಾಗೂ ತಂತ್ರಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದೆ. ಉಕ್ರೇನ್‌ನ ಇಂಧನ ಉತ್ಪಾದನಾ ಕೇಂದ್ರಗಳ ಮೇಲೆ ದಾಳಿ ನಡೆಸಿರುವುದನ್ನು ರಷ್ಯಾ ರಕ್ಷಣಾ ಇಲಾಖೆಯು ಖಚಿತಪಡಿಸಿದೆ.
ಮಾತುಕತೆಗೆ ಪುಟಿನ್‌ಗೆ ಆಸಕ್ತಿಯಿಲ್ಲ: ಉಕ್ರೇನ್ ಮೇಲೆ ರಷ್ಯಾವು ಆಕ್ರಮಣ ತೀವ್ರಗೊಳಿಸಿರುವುದು ಶಾಂತಿ ಮಾತುಕತೆಗೆ ಆಸಕ್ತಿ ಹೊಂದಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಜರ್ಮನ್ ಸರ್ಕಾರವು ತಿಳಿಸಿದೆ.
‘ಸಂಘರ್ಷ ತೀವ್ರಗೊಳಿಸಿರುವುದನ್ನು ಗಮನಿಸಿದರೆ, ಪುಟಿನ್‌ಗೆ ಶಾಂತಿ ಮಾತುಕತೆಯನ್ನು ಬಯಸುತ್ತಿಲ್ಲ ಎಂಬುದನ್ನು ತೋರಿಸುತ್ತದೆ’ ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ.
ನಿರ್ಬಂಧದಿಂದ ಪರಿಣಾಮವಿಲ್ಲ: ‘ಉಕ್ರೇನ್ ಮೇಲೆ ಸಂಘರ್ಷ ನಡೆಸುತ್ತಿರುವ ರಷ್ಯಾದ ಮೇಲೆ ಯಾವುದೇ ನಿರ್ಬಂಧ ಹೇರಿದರೂ ಪರಿಣಾಮ ಬೀರುವುದಿಲ್ಲ’ ಎಂದು ರಷ್ಯಾ ತಿಳಿಸಿದೆ.
ಅಮೆರಿಕ ಹಾಗೂ ಐರೋಪ್ಯ ಒಕ್ಕೂಟವು ಮತ್ತಷ್ಟು ಆರ್ಥಿಕ ನಿರ್ಬಂಧ ಹೇರಲು ಮುಂದಾದ ಬೆನ್ನಲ್ಲೇ, ಕ್ರೆಮ್ಲಿನ್ ಈ ಸ್ಪಷ್ಟನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.