ADVERTISEMENT

ರಷ್ಯಾ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭ: ಪುನರಾಯ್ಕೆ ಬಯಸಿರುವ ಪುಟಿನ್‌

ಏಜೆನ್ಸೀಸ್
Published 15 ಮಾರ್ಚ್ 2024, 11:28 IST
Last Updated 15 ಮಾರ್ಚ್ 2024, 11:28 IST
<div class="paragraphs"><p>ಪುಟಿನ್‌</p></div>

ಪುಟಿನ್‌

   

ಮಾಸ್ಕೊ: ರಷ್ಯಾದ ಅಧ್ಯಕ್ಷೀಯ ಚುನಾವಣೆಗೆ ಶುಕ್ರವಾರ ಮತದಾನ ಆರಂಭವಾಗಿದ್ದು, ಮತದಾನ ಪ್ರಕ್ರಿಯೆ ಮೂರು ದಿನ ನಡೆಯಲಿದೆ.

ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಮತ್ತೊಂದು ಅವಧಿಗೆ ಪುನರಾಯ್ಕೆ ಬಯಸಿದ್ದಾರೆ. 

ADVERTISEMENT

ಮತದಾನ ಪ್ರಕ್ರಿಯೆಯಲ್ಲಿ 11.4 ಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮತದಾನಕ್ಕೆ ಚಾಲನೆ ನೀಡಲಾಯಿತು. ಭಾನುವಾರ ರಾತ್ರಿ 8ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇಶದಾದ್ಯಂತವಿರುವ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ವಿದೇಶಗಳಲ್ಲಿರುವ ರಷ್ಯಾ ನಾಗರಿಕರು ಆಯಾ ದೇಶಗಳಲ್ಲಿನ ರಾಯಭಾರಿ ಕಚೇರಿಗಳಲ್ಲಿ ಮತದಾನ ಮಾಡಬಹುದು. ಭಾರತದಲ್ಲಿ ಕೇರಳದ ತಿರುವನಂತಪುರದಲ್ಲಿ ರಷ್ಯಾದ ನಾಗರಿಕರು ಮತದಾನ ಮಾಡಿದ್ದಾರೆ. 

 ‘1999 ರಿಂದಲೂ ಅಧಿಕಾರದಲ್ಲಿರುವ ಪುಟಿನ್‌ ಅವರಿಗೆ ರಷ್ಯಾದಾದ್ಯಂತ ಜನ ಬೆಂಬಲವಿದ್ದು, ಪುನರಾಯ್ಕೆಯಾಗಲಿದ್ದಾರೆ’ ಎಂದು ಸರ್ಕಾರದ ಮೂಲಗಳು ಹೇಳಿವೆ. ಒಂದು ವೇಳೆ ಪುಟಿನ್‌ ಮುಂದಿನ ಆರು ವರ್ಷಗಳ ಅವಧಿಗೆ ಪುನರಾಯ್ಕೆಯಾದರೆ, 2030ರವರೆಗೂ ಅಧಿಕಾರದಲ್ಲಿರಲಿದ್ದಾರೆ. ಸುದೀರ್ಘ 30 ವರ್ಷಗಳ ಕಾಲ ಪ್ರಧಾನಿ ಅಥವಾ ಅಧ್ಯಕ್ಷರಾಗಿ ಆಡಳಿತ ನಡೆಸಿದ ಹೆಗ್ಗಳಿಕೆಗೆ ಭಾಜನರಾಗಲಿದ್ದಾರೆ.

ಪುಟಿನ್‌ ಅಲ್ಲದೆ ಕಮ್ಯುನಿಸ್ಟ್ ಪಕ್ಷದ ನಿಕೊಲಾಯ್ ಖರಿತೊನೊವ್, ನ್ಯಾಷನಲಿಸ್ಟ್‌ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ಮುಖಂಡ ಲಿಯೊನಿಡ್ ಸ್ಲಟ್‌ಸ್ಕಿ ಮತ್ತು ನ್ಯೂ ಪೀಪಲ್‌ ಪಾರ್ಟಿಯ ವ್ಲಾದಿಸ್ಲಾವ್ ದವನ್ಕೊವ್ ಅವರು ಕಣದಲ್ಲಿದ್ದಾರೆ.

ರಷ್ಯಾ ಸೇನೆಯ ನಿಯಂತ್ರಣದಲ್ಲಿರುವ, ಉಕ್ರೇನ್‌ನ ನಾ‌ಲ್ಕು ಪ್ರಾಂತ್ಯಗಳಲ್ಲೂ ಮತದಾನ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.