ADVERTISEMENT

ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ಕಡಗಣನೆ: ಉಕ್ರೇನ್‌ ಮೇಲೆ ರಷ್ಯಾ ತೀವ್ರ ದಾಳಿ

ಏಜೆನ್ಸೀಸ್
Published 16 ಜುಲೈ 2025, 14:04 IST
Last Updated 16 ಜುಲೈ 2025, 14:04 IST
   

ಕೀವ್‌/ಉಕ್ರೇನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿರುವ ರಷ್ಯಾ, ಉಕ್ರೇನ್‌ ಮೇಲೆ ತೀವ್ರ  ದಾಳಿ ಮುಂದುವರಿಸಿದೆ. 

ಉಕ್ರೇನ್‌ ಜತೆಗೆ ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ದವನ್ನು ನಿಲ್ಲಿಸಲು 50 ದಿನಗಳ ಒಳಗೆ ಶಾಂತಿ ಒಪ್ಪಂದಕ್ಕೆ ಬರಬೇಕು. ಇಲ್ಲದಿದ್ದಲ್ಲಿ ರಷ್ಯಾ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದರು. ಈ ಹೇಳಿಕೆ ಹೊರಬಿದ್ದ ಎರಡು ದಿನಗಳಲ್ಲೇ ರಷ್ಯಾ, ಉಕ್ರೇನ್‌ ಮೇಲೆ ಮತ್ತೆ ದಾಳಿ ನಡೆಸಿದೆ. 

ಉಕ್ರೇನ್‌ ಅಧ್ಯಕ್ಷ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ತವರು ಕ್ರಿವಿ ರಿಗ್‌ ಪಟ್ಟಣವನ್ನು ಗುರಿಯಾಗಿಸಿಕೊಂಡು ರಷ್ಯಾ ನಡೆಸಿದ  ಕ್ಷಿಪಣಿ ದಾಳಿಯಲ್ಲಿ ಅಲ್ಲಿನ ಕೈಗಾರಿಕೆ, ವಿದ್ಯುತ್‌ ಮತ್ತು ನೀರು ಪೂರೈಕೆ ಸೇರಿದಂತೆ ಮೂಲಸೌಕರ್ಯಕ್ಕೆ ಅಪಾರ ಪ್ರಮಾಣದ ಹಾನಿಯಾಗಿದೆ. ಒಬ್ಬ ಮಹಿಳೆ ಮೃತಪಟ್ಟಿದ್ದು, 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.  

ADVERTISEMENT

ವಿನ್ನಿಟ್ಸಿಯ, ಖಾರ್ಕೀವ್‌, ಕ್ರಿವಿ ರಿಗ್‌ ಸೇರಿದಂತೆ ಹಲವೆಡೆ ಮಂಗಳವಾರ ತಡರಾತ್ರಿ ಮತ್ತು ಬುಧವಾರ ಬೆಳಗಿನ ಜಾವ 400ಕ್ಕೂ ಹೆಚ್ಚು ಡ್ರೋನ್‌ ಮತ್ತು ಕ್ಷಿಪಣಿ ಬಳಸಿ ರಷ್ಯಾ ದಾಳಿ ನಡೆಸಿದೆ ಎಂದು ಉಕ್ರೇನ್‌ ಹೇಳಿದೆ.

ಕಾರ್ಯಸೂಚಿ ಬಗ್ಗೆ ನಿಗಾ: ಕ್ರೆಮ್ಲಿನ್

ಮಾಸ್ಕೊ (ರಾಯಿಟರ್ಸ್‌): ‘ನ್ಯಾಟೊ’ ಮೂಲಕ ಉಕ್ರೇನ್‌ಗೆ ಹೆಚ್ಚಿನ ಶಸ್ತ್ರಾಸ್ತ್ರ ಪೂರೈಸಲು ಅಮೆರಿಕ ಒಪ್ಪಿಗೆ ನೀಡಿರುವುದರ ಹಿಂದಿನ ಕಾರ್ಯಸೂಚಿ ಬಗ್ಗೆ ತೀವ್ರ ನಿಗಾ ವಹಿಸುತ್ತಿರುವುದಾಗಿ ರಷ್ಯಾದ ಆಡಳಿತ ಕಚೇರಿ ಕ್ರೆಮ್ಲಿನ್ ಹೇಳಿದೆ.  ಕದನ ವಿರಾಮಕ್ಕೆ ಸಂಬಂಧಿಸಿದಂತೆ ಅಮೆರಿಕದ ಹಸ್ತಕ್ಷೇಪವನ್ನು ತಳ್ಳಿಹಾಕಿರುವ ಕ್ರೆಮ್ಲಿನ್‌  ‘ನೇರ ಶಾಂತಿ ಮಾತುಕತೆ‘ಗೆ ಸಿದ್ಧವಿರುವುದಾಗಿ  ಪುನರುಚ್ಚರಿಸಿದೆ. ಆದರೆ ಈ ಮಾತುಕತೆಗೆ ಸಂಬಂಧಿಸಿದಂತೆ ಯಾವುದೇ ದಿನವನ್ನು ಸೂಚಿಸಿಲ್ಲ.  ‘ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸುವುದು ವ್ಯಾಪಾರ. ಯುರೋಪಿನ ಕೆಲವು ದೇಶಗಳು ಇದಕ್ಕೆ ಹಣ ಒದಗಿಸುತ್ತಿವೆ’ ಎಂದು  ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.