ADVERTISEMENT

ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿ 8.7 ತೀವ್ರತೆಯ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2025, 2:28 IST
Last Updated 30 ಜುಲೈ 2025, 2:28 IST
   

ಮಾಸ್ಕೊ: ರಷ್ಯಾದ ಪೂರ್ವ ಭಾಗದ ಕಮ್ಚಟ್ಕಾ ದ್ವೀಪದಲ್ಲಿ ಬುಧವಾರ 8.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸಮುದ್ರದಲ್ಲಿ 4 ಮೀಟರ್ (13 ಅಡಿ) ಎತ್ತರದ ಅಲೆಗಳೊಂದಿಗೆ ಸುನಾಮಿ ಎದ್ದಿದೆ. ಭೂಕಂಪದ ಪರಿಣಾಮವಾಗಿ ಹಲವು ಜನರನ್ನು ಸ್ಥಳಾಂತರಿಸಲಾಗಿದ್ದು, ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಅಮೆರಿಕ, ಜಪಾನ್ ಸೇರಿದಂತೆ ಸಮೀಪದ ಇತರ ದೇಶಗಳಿಗೆ ಪೆಸಿಫಿಕ್ ಮಹಾಸಾಗರದ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಸುಮಾರು 165,000 ಜನಸಂಖ್ಯೆಯನ್ನು ಹೊಂದಿರುವ ಕರಾವಳಿ ನಗರವಾದ ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಟ್ಸ್ಕಿಯಿಂದ ಸುಮಾರು 125 ಕಿಲೋಮೀಟರ್ (80 ಮೈಲುಗಳು) ದೂರದಲ್ಲಿ ಪೂರ್ವ-ಆಗ್ನೇಯದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ.

ADVERTISEMENT

ಪೆಸಿಫಿಕ್ ಕರಾವಳಿಯಲ್ಲಿ ಸುನಾಮಿ ಅಲೆಗಳು

ಭೂಕಂಪದ ನಂತರ, ಕಮ್ಚಟ್ಕಾ ಪ್ರದೇಶದ ಕೆಲವು ಭಾಗಗಳಲ್ಲಿ 3 ರಿಂದ 4 ಮೀಟರ್ ಎತ್ತರದ ಅಲೆಗಳ ಸುನಾಮಿ ದಾಖಲಾಗಿದೆ ಎಂದು ರಷ್ಯಾದ ತುರ್ತು ಪರಿಸ್ಥಿತಿಗಳ ಪ್ರಾದೇಶಿಕ ಸಚಿವರು ತಿಳಿಸಿದ್ದಾರೆ. ಜನರು ಕರಾವಳಿಯಿಂದ ದೂರ ಹೋಗಬೇಕೆಂದು ಸಲಹೆ ನೀಡಲಾಗಿದೆ..

ಮುಂದಿನ ಮೂರು ಗಂಟೆಗಳಲ್ಲಿ ಅಪಾಯಕಾರಿ ಸುನಾಮಿ ಅಲೆಗಳು ಏಳಬಹುದೆಂದು ಅಮೆರಿಕದ ಸುನಾಮಿ ಎಚ್ಚರಿಕೆ ವ್ಯವಸ್ಥೆಯು ಮುನ್ಸೂಚನೆ ನೀಡಿದೆ. ವಾಯುವ್ಯ ಹವಾಯಿಯನ್ ದ್ವೀಪಗಳು ಮತ್ತು ರಷ್ಯಾದ ಕರಾವಳಿಯಲ್ಲಿ ಉಬ್ಬರವಿಳಿತದ ಮಟ್ಟಕ್ಕಿಂತ 3 ಮೀಟರ್ ಎತ್ತರದ(10 ಅಡಿ) ಅಲೆಗಳು ಏಳಬಹುದು ಎಂದು ಅಂದಾಜಿಸಲಾಗಿದೆ.

ಇದಲ್ಲದೆ, ಉಬ್ಬರವಿಳಿತದ ಮಟ್ಟಕ್ಕಿಂತ 0.3 ರಿಂದ 1 ಮೀಟರ್ (1 ರಿಂದ 3.3 ಅಡಿ) ವರೆಗಿನ ಸುನಾಮಿ ಅಲೆಗಳು ಚುಕ್, ಕೊಸ್ರೇ, ಮಾರ್ಷಲ್ ದ್ವೀಪಗಳು, ಪಲಾವ್, ಫಿಲಿಪೈನ್ಸ್‌ನ ಕೆಲವು ಭಾಗಗಳಲ್ಲಿ ಏಳಬಹುದು ಎಂದು ಸಂಸ್ಥೆ ವರದಿ ಮಾಡಿದೆ. ಏತನ್ಮಧ್ಯೆ, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ ಮತ್ತು ತೈವಾನ್ ಕರಾವಳಿಯಲ್ಲಿ ಸಣ್ಣ ಸುನಾಮಿ ಅಲೆಗಳನ್ನು ನಿರೀಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.

ಅಮೆರಿಕದ ಅಲಾಸ್ಕಾದಲ್ಲಿರುವ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರವು, ಅಲಾಸ್ಕಾ ಅಲ್ಯೂಟಿಯನ್ ದ್ವೀಪಗಳ ಕೆಲವು ಭಾಗಗಳಿಗೆ ಸುನಾಮಿ ಎಚ್ಚರಿಕೆ ನೀಡಿದೆ. ಕ್ಯಾಲಿಫೋರ್ನಿಯಾ, ಒರೆಗಾನ್ ಮತ್ತು ವಾಷಿಂಗ್ಟನ್ ಹಾಗೂ ಹವಾಯಿ ಸೇರಿದಂತೆ ಪಶ್ಚಿಮ ಕರಾವಳಿಯ ಕೆಲವು ಭಾಗಗಳ ಮೇಲೆ ನಿಗಾ ವಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.