ವಿಮಾನ
(ಸಾಂಕೇತಿಕ ಚಿತ್ರ)
ಮೆಲ್ಬರ್ನ್: ‘ಉಕ್ರೇನ್‌ನ ವಾಯುಗಡಿಯಲ್ಲಿ ‘ಮಲೇಷ್ಯಾ ಏರ್‌ಲೈನ್ಸ್’ ವಿಮಾನವನ್ನು ಉಕ್ರೇನ್‌ನ ಗಡಿ ಭಾಗದಲ್ಲಿರುವ ರಷ್ಯಾ ಬೆಂಬಲಿತ ಪತ್ಯೇಕತಾವಾದಿಗಳು ಕ್ಷಿಪಣಿ ಮೂಲಕ ದಾಳಿ ನಡೆಸಿ ಹೊಡೆದುರುಳಿಸಿದ್ದರು’ ಎಂದು ಕೆನಾಡದ ಮೊಂಟ್ರಾಲ್‌ದಲ್ಲಿರುವ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯು (ಐಸಿಎಒ) ಮಂಗಳವಾರ ತೀರ್ಪು ನೀಡಿದೆ.
ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಮುಂದಿನ ಕೆಲವು ವಾರಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಸಂಸ್ಥೆ ಹೇಳಿದೆ. ಈ ಘಟನೆಯು 2014ರ ಜುಲೈನಲ್ಲಿ ನಡೆದಿತ್ತು ಮತ್ತು ದುರಂತದಲ್ಲಿ ಸುಮಾರು 298 ಮಂದಿ ಮೃತಪಟ್ಟಿದ್ದರು. ತೀರ್ಪಿನ ಕುರಿತು ರಷ್ಯಾವು ಪ್ರತಿಕ್ರಿಯೆ ನೀಡಿಲ್ಲ. ಆದರೆ, ತಮ್ಮ ಮೇಲಿನ ಎಲ್ಲ ಆರೋಪಗಳನ್ನು ರಷ್ಯಾ ನಿರಾಕರಿಸುತ್ತಲೇ ಬಂದಿದೆ.
ನಾಗರಿಕ ವಿಮಾನದ ಮೇಲೆ ಯಾವುದೇ ಕಾರಣಕ್ಕೂ ಸಶಸ್ತ್ರ ದಾಳಿ ನಡೆಸಬಾರದು ಎಂದು ಚಿಕಾಗೊ ಸಮ್ಮೇಳನದಲ್ಲಿ ಮಾಡಿಕೊಂಡ ಒಪ್ಪಂದವನ್ನು ರಷ್ಯಾ ಉಲ್ಲಂಘಿಸಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. 193 ಸದಸ್ಯ ರಾಷ್ಟ್ರಗಳಿರುವ ಈ ಸಂಸ್ಥೆಯು ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪ್ರಕರಣವೊಂದನ್ನು ಇತ್ಯರ್ಥಪಡಿಸಿದೆ.
‘ಮುಂದಿನ ಕ್ರಮ ಕೈಗೊಳ್ಳುವುದಕ್ಕಾಗಿ ನಿಮ್ಮ ಮುಂದೆ ರಷ್ಯಾವು ಹಾಜರಾಗಲು ಆದೇಶಿಸಿ’ ಎಂದು ನೆದರ್ಲೆಂಡ್ಸ್ ಮತ್ತು ಆಸ್ಟ್ರೇಲಿಯಾ ಸರ್ಕಾರಗಳು ವಿಮಾನಯಾನ ಸಂಸ್ಥೆಯನ್ನು ಕೋರಿವೆ. ಮಲೇಷ್ಯಾ ಏರ್‌ಲೈನ್ಸ್ ವಿಮಾನವು ಆಮ್‌ಸ್ಟರ್‌ಡ್ಯಾಮ್‌ನಿಂದ ಕೌಲಾಲಂಪುರಕ್ಕೆ ತೆರಳುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.