ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ಮಾಸ್ಕೊ/ಕೀವ್: ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧಕ್ಕೆ 30 ದಿನಗಳ ಕದನ ವಿರಾಮ ನೀಡುವ ಅಮೆರಿಕದ ಪ್ರಸ್ತಾವಕ್ಕೆ ಉಕ್ರೇನ್ ಸಮ್ಮತಿ ಸೂಚಿಸಿ ಎರಡು ದಿನಗಳಾಗಿದ್ದರೂ ರಷ್ಯಾವು ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ, ‘ಈ ವಿಚಾರದ ಬಗ್ಗೆ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಅವರೇ ಸ್ಪಷ್ಟ ನಿಲುವು ವ್ಯಕ್ತಪಡಿಸಲಿದ್ದಾರೆ ಎಂದು ರಷ್ಯಾ ತಿಳಿಸಿದೆ.
ಕದನವಿರಾಮ ಪ್ರಸ್ತಾವದ ಕುರಿತು ಪುಟಿನ್ ಅವರ ಸಲಹೆಗಾರ ಯುರಿ ಯುಶೆಕಾಫ್ ಅವರು ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಪ್ರಾಚ್ಯದ ವಿಶೇಷ ರಾಯಭಾರಿಯೊಂದಿಗೆ ಮಾತುಕತೆ ನಡೆಸಿ, ನಮ್ಮ ನಿಲುವೇನು ಎಂಬುದನ್ನು ತಿಳಿಸಿದ್ದೇನೆ. ಈ ಪ್ರಸ್ತಾವದಿಂದ ನಿರಂತರ ಯುದ್ಧದಲ್ಲಿ ನಿರತರಾಗಿರುವ ಉಕ್ರೇನ್ ಸೈನಿಕರಿಗೆ 30 ದಿನಗಳ ತಾತ್ಕಾಲಿಕ ಬಿಡುವು ನೀಡಿದಂತಾಗುತ್ತದೆಯಷ್ಟೇ’ ಎಂದರು.
‘ದೇಶದ ಹಿತದೃಷ್ಟಿಯಿಂದ ದೂರಗಾಮಿಯಾಗಿರುವ ಒಪ್ಪಂದವೊಂದು ಮೂಡಬೇಕೆಂಬುದು ನಮ್ಮ ನಿಲುವು. ಶಾಂತಿ ಒಪ್ಪಂದದಂತೆ ತೋರುವ ಇಂಥ ಪ್ರಸ್ತಾವಗಳ ಅಗತ್ಯವೇ ಇಲ್ಲ’ ಎಂದರು. ಇದಕ್ಕೆ ಮರುಪ್ರಶ್ನೆ ಹಾಕಿದ ನಿರೂಪಕರು, ‘ಹಾಗಾದರೆ, ಈ ಪ್ರಸ್ತಾವವನ್ನು ರಷ್ಯಾ ತಿರಸ್ಕರಿಸುತ್ತದೆಯೇ’ ಎಂದರು. ‘ಈ ಬಗ್ಗೆ ಪುಟಿನ್ ಅವರು ಗುರುವಾರ ವಿಸ್ತೃತ ಮಾಧ್ಯಮಗೋಷ್ಠಿ ನಡೆಸಲಿದ್ದಾರೆ’ ಎಂದು ಯುರಿ ಪ್ರತಿಕ್ರಿಯಿಸಿದರು.
ಸೇನಾ ಕಾರ್ಯಾಚರಣೆ: ಕದನ ವಿರಾಮ ಪ್ರಸ್ತಾವದ ಕುರಿತು ಚರ್ಚೆ ನಡೆಯುತ್ತಿರುವ ವೇಳೆಯಲ್ಲಿಯೇ ತನ್ನ ಕರ್ಕ್ಸ್ ನಗರದಿಂದ ರಷ್ಯಾವು ಗುರುವಾರ ಉಕ್ರೇನ್ ಸೇನೆಯನ್ನು ಹಿಮ್ಮೆಟಿಸಿದೆ. ನಿರಂತರ ಯುದ್ಧದಿಂದ ಕಂಗೆಟ್ಟಿದ್ದ ರಷ್ಯಾ ಸೇನೆಯನ್ನು ಹುರಿದುಂಬಿಸಲು ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಅವರು ಸೇನಾ ಸಮವಸ್ತ್ರದಲ್ಲಿಯೇ ಕರ್ಕ್ಸ್ ನಗರಕ್ಕೆ ತೆರಳಿದ್ದರು. ಈ ಭೇಟಿಯ ವಿಡಿಯೊವನ್ನು ಮಾರ್ಚ್ 12ಕ್ಕೆ ರಷ್ಯಾ ಹಂಚಿಕೊಂಡಿದೆ. ಈ ಭೇಟಿಯ ಬಳಿಕವೇ ಸುಡ್ಜ ನಗರದಿಂದ ಉಕ್ರೇನ್ ಸೇನೆಯನ್ನು ರಷ್ಯಾ ಹಿಮ್ಮೆಟ್ಟಿಸಿತು.
ದುರದೃಷ್ಟವಶಾತ್ ಕದನ ವಿರಾಮ ಪ್ರಸ್ತಾವ ಕುರಿತು ಚರ್ಚೆ ನಡೆಯುತ್ತ ಒಂದು ದಿನ ಕಳೆದಿದ್ದರೂ ರಷ್ಯಾದಿಂದ ‘ಅರ್ಥಪೂರ್ಣ’ವಾದ ಪ್ರತಿಕ್ರಿಯೆ ಬಂದಿಲ್ಲ. ರಷ್ಯಾದ ಈ ನಡೆಯು ಅದಕ್ಕೆ ಇರುವ ಯುದ್ಧದಾಹವನ್ನೂ ಈ ಮೂಲಕ ಶಾಂತಿ ಸ್ಥಾಪನೆಯನ್ನು ಮುಂದೂಡಲು ಬಯಸುವ ಅದರ ಸ್ವಭಾವವನ್ನು ತೋರಿಸುತ್ತದೆ. ಯುದ್ಧ ಅಂತ್ಯಗೊಳಿಸಲು ಅಮೆರಿಕವು ಒತ್ತಡ ಹೇರುತ್ತದೆ ಎಂದು ನಾವು ನಂಬಿದ್ದೇವೆ ವೊಲೊಡಿಮಿರ್ ಝೆಲೆನ್‌ಸ್ಕಿ ಉಕ್ರೇನ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.